

ನರಗುಂದ: ಕ್ಷೇತ್ರದಾದ್ಯಂತ ಚುನಾವಣೆ ಪೂರ್ವದಲ್ಲಿ ಶಾಸಕ ಸಿ.ಸಿ. ಪಾಟೀಲ ಅವರು ಕೈಗೊಂಡಿರುವ ಅಂದಾಜು 500 ಕೋಟಿ ರೂಪಾಯಿ ಮೊತ್ತದ ರಸ್ತೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗಿವೆ. ಈ ಬಗ್ಗೆ ತನಿಖೆಗೆ ಸರ್ಕಾರಕ್ಕೆ ಜೂನ್ 30ರಂದು ಸರ್ಕಾರಕ್ಕೆ ಲಿಖಿತವಾಗಿ ದೂರು ಸಲ್ಲಿಸಿದ್ದೆ. ನಮ್ಮ ಮನವಿಗೆ ಸ್ಪಂದಿಸಿರುವ ಸರ್ಕಾರ ತನಿಖೆಗೆ ಮುಂದಾಗಿದೆ ಎಂದು ಮಾಜಿ ಶಾಸಕ ಬಿ.ಆರ್. ಯಾವಗಲ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕೋಪಯೋಗಿ, ಜಿಪಂ, ನೀರಾವರಿ ಇಲಾಖೆ ಸೇರಿ ಪ್ರತಿಯೊಂದು ಇಲಾಖೆಗಳಲ್ಲಿಯೂ ನೂರಾರು ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳು ನಡೆದಿದೆ. ಅವುಗಳ ಗುಣಮಟ್ಟದ ಬಗ್ಗೆ ಸೂಕ್ತ ತನಿಖೆಗೆ ಸರ್ಕಾರ ಅಧಿಕಾರಿಗಳ ತಂಡ ರಚಿಸಿದೆ. ಈ ತಂಡವು ಕಾಮಗಾರಿಗಳನ್ನು ಪರಿಶೀಲಿಸಿ 30 ದಿನಗಳೊಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದರು.
ಸಿ.ಸಿ. ಪಾಟೀಲ ಅವರು ಸಚಿವರಾಗಿದ್ದ ಅವಧಿಯಲ್ಲಿ ರಸ್ತೆ ಕಾಮಗಾರಿಗಳನ್ನು ಗುತ್ತಿಗೆದಾರರಿಂದ ಸರಿಯಾಗಿ ಮಾಡಿಸಲಿಲ್ಲ ಎಂದು ತಾಲೂಕಿನ ಅನೇಕರು ನನಗೆ ದೂರು ನೀಡಿದ್ದರು. ಸಾರ್ವಜನಿಕ ಹಣ ದುರಪಯೋಗ ಆಗಬಾರದು ಎಂಬ ಉದ್ದೇಶದಿಂದ ನಾನು ತನಿಖೆಗೆ ಆಗ್ರಹಿಸಿದ್ದೆ ಎಂದರು.
ಮಲಪ್ರಭಾ ಕೋಮಲ್ ಆಯಿಲ್ ಮಿಲ್ ಗುತ್ತಿಗೆ ನೀಡಲು ಎರಡು ಬಾರಿ ಸಿದ್ಧತೆ ನಡೆಸಿದರೂ ಅದರ ವಿರುದ್ಧ ಷಡ್ಯಂತ್ರ ನಡೆಯಿತು. ನಾನು ಶಾಸಕನಾಗಿದ್ದ ಅವಧಿಯಲ್ಲಿ 110 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ಮನೆಗಳ ಕಾಮಗಾರಿಗೆ ಅಡೆತಡೆ ಮಾಡಿದ್ದ ಸಿ.ಸಿ. ಪಾಟೀಲರು, ತಮ್ಮ ಅವಧಿಯಲ್ಲಿ ಅವುಗಳ ಕೆಲಸ ಮಾಡಲಿಲ್ಲ. ಪುರಸಭೆ ಕಟ್ಟಡ ಕಾಮಗಾರಿ 5 ವರ್ಷದಿಂದ ಆಗಿಲ್ಲ. ಜಿಟಿಟಿಸಿ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ನಾನು ತಂದೆ. ಅವುಗಳನ್ನು ಪಾಟೀಲರು ತಮ್ಮ ಅವಧಿಯಲ್ಲಿ ಆರಂಭ ಮಾಡಲಿಲ್ಲ ಎಂದು ಟೀಕಿಸಿದರು.