ಕೋವಿಡ್ 2ನೇ ಅಲೆ ತಡೆಗೆ ತಂಡ ರಚನೆ

11 vikram 1
Published on

ಧಾರವಾಡ: ಕೋವಿಡ್ 2ನೇ ಅಲೆ ಉಲ್ಬಣಗೊಳ್ಳುತ್ತಿರುವುದರಿಂದ ಜಿಲ್ಲೆಯಲ್ಲಿ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಹೀಗಾಗಿ ಹಲವು ಕ್ರಮಗಳನ್ನು ಅನುಸರಿಸಲು, ಉದ್ಭವಿಸುವ ಸಮಸ್ಯೆ ಎದುರಿಸಲು ಹಾಗೂ ಜನರ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ವಿವಿಧ ಕಾರ್ಯಗಳಿಗೆ ನೋಡಲ್ ಅಧಿಕಾರಿಗಳನ್ನು ಮತ್ತು ವಿವಿಧ ತಂಡಗಳಿಗೆ ಸದಸ್ಯರನ್ನು ನೇಮಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ನೋಡಲ್ ಅಧಿಕಾರಿಗಳು: 108 ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗಳಿಗೆ ತುರ್ತು ಚಿಕಿತ್ಸೆಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಎಲ್ಲ ತಾಲೂಕುಗಳ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಸಹಾಯದೊಂದಿಗೆ ಸಮರ್ಪಕವಾಗಿ ನಿರ್ವಹಿಸಲು ಭೂ ದಾಖಲೆಗಳ ಉಪನಿರ್ದೇಶಕ ವಿಜಯಕುಮಾರ, ಸೋಂಕಿತರ ಸಂಪರ್ಕ ಪತ್ತೆ ಹಚ್ಚುವಿಕೆ ಕೆಲಸ ನಿರ್ವಹಿಸಲು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಎನ್. ಕುಮ್ಮಣ್ಣನ್ನವರ ಮತ್ತು ಪಶುಪಾಲನೆ ಇಲಾಖೆ ಮಾದರಿ ಸಮೀಕ್ಷೆ ಯೋಜನೆ ಸಹಾಯಕ ನಿರ್ದೇಶಕ ಕಂಟೆಪ್ಪಗೌಡರ, ಕೋವಿಡ್ ಕಂಟ್ರೋಲ್ ರೂಂ ಕೆಲಸ ಕಾರ್ಯಗಳ ನಿರ್ವಹಣೆ ಉಸ್ತುವಾರಿಗೆ ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ಬಿ. ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಅವರನ್ನು ನೇಮಿಸಲಾಗಿದೆ.

ಸಂಪರ್ಕ ಪತ್ತೆ ಹಚ್ಚುವ ತಂಡ: ಹುಡಾ ಆಯುಕ್ತ ಎನ್. ಕುಮ್ಮಣ್ಣನವರ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಸುಜಾತಾ ಹಸವಿಮಠ (ಸದಸ್ಯ ಕಾರ್ಯದರ್ಶಿ), ಕಿಮ್ಸ್​ನ ಡಾ. ಲಕ್ಷ್ಮೀಕಾಂತ, ಬಿಸಿಎಂ ಇಲಾಖೆ ಡಿಒ ಅಜ್ಜಪ್ಪ ಸೊಗಲದ, ಅಲ್ಪಸಂಖ್ಯಾತರ ಇಲಾಖೆ ಡಿಒ ಅಬ್ದುಲ್ ರಷೀದ್ ಮಿರ್ಜನ್ನವರ, ಜಿಲ್ಲಾ ಅಂಕಿ ಸಂಖ್ಯೆ ಅಧಿಕಾರಿ ಎಂ.ಕೆ. ತಳವಾರ, ಸಹಾಯಕ ಅಂಕಿ ಸಂಖ್ಯೆ ಅಧಿಕಾರಿ ಕಂಟೆಪ್ಪಗೌಡರ ಸೇರಿ ವಿವಿಧ ಇಲಾಖೆಗಳ 23 ಜನ ಅಧಿಕಾರಿ ಮತ್ತು ಸಿಬ್ಬಂದಿ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಹೋಂ ಕ್ವಾರಂಟೈನ್ ಫಾಲೋಅಪ್ ತಂಡ: ಉಪಪೊಲೀಸ್ ಆಯುಕ್ತ (ಕೋ ಚೇರ್ಮನ್), ಡಿವೈಎಸ್​ಪಿ ಧಾರವಾಡ (ಸದಸ್ಯ ಕಾರ್ಯದರ್ಶಿ), ಪಾಲಿಕೆ ಜಂಟಿ ಆಯುಕ್ತ ಅಜೀಜ್ ದೇಸಾಯಿ, ಜಿಲ್ಲೆಯ ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳು ತಂಡದಲ್ಲಿದ್ದಾರೆ.

ಹೋಂ ಐಸೋಲೇಶನ್ ತಂಡ: ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ (ಕೋ ಚೇರ್ಮನ್), ಜಿಲ್ಲಾ ಸರ್ವೆಕ್ಷಣಾಧಿಕಾರಿ ಸುಜಾತಾ ಹಸವಿಮಠ (ಸದಸ್ಯ ಕಾರ್ಯದರ್ಶಿ), ಡಾ. ಸಂಪತ್ ಕುಮಾರ್ ಮತ್ತು ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳು ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಕೋವಿಡ್ ವ್ಯಕ್ತಿಗಳ ಸ್ಥಳಾಂತರ ತಂಡ: ಭೂದಾಖಲೆಗಳ ವಿಭಾಗದ ಉಪನಿರ್ದೇಶಕ ವಿಜಯಕುಮಾರ (ಕೊ ಚೇರ್ಮನ್), ಡಾ.ಶಶಿ ಪಾಟೀಲ (ಸದಸ್ಯ ಕಾರ್ಯದರ್ಶಿ), ಆರ್​ಸಿಎಚ್​ಒ ಡಾ. ಎಸ್.ಎಂ. ಹೊನಕೇರಿ, ದೀಪಕ ಮಡಿವಾಳರ, ಡಾ. ಸುಜಾತಾ ಹಸವಿಮಠ ಮತ್ತು ತಾಲೂಕಾ ಆರೋಗ್ಯ ಅಧಿಕಾರಿಗಳು ತಂಡದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ಪ್ರಯೋಗಾಲಯ (ಟೆಸ್ಟಿಂಗ್) ನಿರ್ವಹಣಾ ತಂಡ: ಡಾ. ಪ್ರಮೋದ ಸಾಂಬ್ರಾಣಿ (ಕೋ ಚೇರ್ಮನ್), ಕಿಮ್್ಸ ಸಂಸ್ಥೆಯ ಡಾ. ಆಶಾ ಪಾಟೀಲ (ಸದಸ್ಯ ಕಾರ್ಯದರ್ಶಿ), ಡಾ. ಮಹೇಶ ಮತ್ತು ಡಾ. ಹರ್ಷಿಕಾ ತಂಡದಲ್ಲಿದ್ದಾರೆ.

ಕೋವಿಡ್ ಕೇರ್ ಸೆಂಟರ್​ಗಳು: ಹುಬ್ಬಳ್ಳಿ ಘಂಟಿಕೇರಿಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ (100 ಸಾಮರ್ಥ್ಯ), ಗೋಕುಲದಲ್ಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ವಸತಿ ನಿಲಯ (100), ಗೋಕುಲ ರಸ್ತೆಯ ವೈದ್ಯಕೀಯ ಮತ್ತು ಇಂಜಿನೀಯರಿಂಗ್ ವಿದ್ಯಾರ್ಥಿಗಳ ನಿಲಯ (100) ಮತ್ತು ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯ ಆವರಣದ ಬಿಸಿಎಂ ವಿದ್ಯಾರ್ಥಿನಿಲಯ (100) ಗಳನ್ನು ಗುರುತಿಸಲಾಗಿದೆ.

ರಚಿಸಿರುವ ಎಲ್ಲ ತಂಡಗಳು ತಮಗೆ ವಹಿಸಿದ ಕಾರ್ಯಗಳನ್ನು ಸಕಾಲದಲ್ಲಿ, ಸಮರ್ಪಕವಾಗಿ ನಿರ್ವಹಿಸಬೇಕು. ಆ ದಿನದ ಚಟುವಟಿಕೆಗಳು ಹಾಗೂ ವರದಿಗಳನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸಲ್ಲಿಸಬೇಕು. ಕರ್ತವ್ಯಲೋಪ ಕಂಡುಬಂದಲ್ಲಿ ಅಂತಹ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 1897 ಅನ್ವಯ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net