ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬರೆಯಲು ಕಲಿಸುವುದು ಸವಾಲಿನ ಕೆಲಸ: ಡಾ.ಕವಿತಾ ರೈ

5
Published on

ಮೈಸೂರು: ಒಂದು ಭಾಷೆಯ ಜನರಿಗೆ ಮತ್ತೊಂದು ಭಾಷೆಯನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬರೆಯುವುದನ್ನು ಕಲಿಸುವುದು ಸವಾಲಿನ ಕೆಲಸವಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಕ್ಕ ಮಹಾದೇವಿ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕಿ ಡಾ.ಕವಿತಾ ರೈ ಹೇಳಿದರು.

ನಗರದ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಕಲ್ಪನಾ ಮುಕುಂದ ಅಯ್ಯಂಗಾರ್ ವಿರಚಿತ ‘ಟೀಚಿಂಗ್ ಇಂಗ್ಲಿಷ್ ರೈಟಿಂಗ್ ಟು ದಿ ಡಯಾಸ್ಪೊರಾ: ಸೋಷಿಯಲ್ ಆ್ಯಂಡ್ ಕಲ್ಚರಲ್ ಪರ್ಸ್‌ಫೆಕ್ಟಿವ್’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಂತ್ರಜ್ಞಾನದ ಫಲವಾಗಿ ಒಂದು ಭಾಷೆಯಿಂದ ಮತ್ತೊಂದು ಭಾಷೆಯ ನಡುವೆ ಕೊಡು-ಕೊಳ್ಳುವ ಪ್ರಕ್ರಿಯೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಪ್ರಸ್ತುತ ಕಾಲಘಟ್ಟದ ಯುವಕರು ಕೈ ಬರವಣಿಗೆ ಬಿಟ್ಟು ಕಂಪ್ಯೂಟರ್ ಬರವಣಿಗೆಯಲ್ಲಿ ಪ್ರಾವಿಣ್ಯತೆ ಪಡೆದಿದ್ದಾರೆ. ಆದ್ದರಿಂದ ಕೈ ಬರಹ ಬರೆಯುವುದಕ್ಕೆ ಹೆದರಿಕೊಳ್ಳಬೇಕಾದ ಸನ್ನಿವೇಶ ಉಂಟಾಗಿದೆ ಎಂದರು.

ತಂತ್ರಜ್ಞಾನ ಹೀಗೆಯೇ ಮುಂದುವರಿದರೆ ಮುಂದೆ ಕೃತಕ ಬುದ್ಧಿಮತ್ತೆಯ ನೆರವಿನಿಂದ ಬರೆಯಿಸುವ ಸಂದರ್ಭ ಬಂದರೂ ಅಚ್ಚರಿ ಪಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದರು.

ಒಂದು ಭಾಷೆಯ ಜನರಿಗೆ ಮತ್ತೊಂದು ಭಾಷೆಯನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬರೆಯುವುದನ್ನು ಕಲಿಸುವುದು ಈಗ ಸವಾಲಿನ ಕೆಲಸವಾಗಿದೆ. ಒಂದು ಭಾಷೆಯನ್ನು ಎಲ್ಲರೂ ಒಂದೇ ರೀತಿಯಲ್ಲಿ ಮಾತನಾಡಲು ಸಾಧ್ಯವಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಬೆರಳಚ್ಚಿನಲ್ಲಿ ವಿಭಿನ್ನತೆ ಇರುವಂತೆ ಮಾತಿನಲ್ಲಿಯೂ ಭಿನ್ನತೆ ಇದೆ. ಒಬ್ಬ ವ್ಯಕ್ತಿ ಮಾತನಾಡುವಂತೆಯೇ ಮತ್ತೊಬ್ಬ ವ್ಯಕ್ತಿ ಮಾತನಾಡುವುದಿಲ್ಲ ಎಂದು ವಿವರಿಸಿದರು

ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಬರವಣಿಗೆ ಅತ್ಯಂತ ಅಗತ್ಯ. ಹಕ್ಕುಗಳ ಪ್ರತಿಪಾದನೆಗೆ, ವಿವಿಧ ಇಲಾಖೆಯ ಕಚೇರಿಗಳಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಕಾರ್ಯಗತಗೊಳಿಸಿಕೊಳ್ಳಲು, ತಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಜನರು ವಿಷಯವನ್ನು ಬರವಣಿಗೆಯ ರೂಪದಲ್ಲಿಯೇ ವಿವರಿಸಬೇಕಾಗಿದೆ. ಆದ್ದರಿಂದ ಬರವಣಿಗೆ ಎಂದಿಗೂ ತನ್ನ ಪ್ರಾಮುಖ್ಯವನ್ನು ಉಳಿಸಿಕೊಳ್ಳಲಿದೆ ಎಂದು ವಿವರಿಸಿದರು.

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಕವಯತ್ರಿ ಜ್ಯೋತಿ ಗುರುಪ್ರಸಾದ್, ಇತ್ತೀಚೆಗೆ ಕೃತಿಚೌರ್ಯ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕೃತಿಚೌರ್ಯದಿಂದ ಓದು ಮತ್ತು ಆಲೋಚನೆಯ ನಡುವಿನ ಕೊಂಡಿ ಕಳಚಿಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಯಾರದ್ದೋ ಬರವಣಿಗೆಯನ್ನು ಇನ್ಯಾರೋ ಕದ್ದು ಪ್ರಕಟಿಸುತ್ತಿದ್ದಾರೆ. ಇದಕ್ಕೆ ಶಿಕ್ಷಣ ಕ್ಷೇತ್ರದಲ್ಲಿನ ಬೋಧನಾ ವಿಧಾನಗಳ ವೈಫಲ್ಯವೇ ಕಾರಣ ಎಂದು ವಿಷಾದಿಸಿದರು.

ವಿದ್ಯಾರ್ಥಿಗಳು ಸಂತಸದಿಂದ ಕಲಿಯುವ ರೀತಿಯಲ್ಲಿ ಶಾಲಾ-ಕಾಲೇಜುಗಳ ಬೋಧನಾ ವಿಧಾನ ಇರಬೇಕು. ಆಗ ವಿದ್ಯಾರ್ಥಿಗಳು ಸ್ವತಂತ್ರವಾಗಿ ಬರೆಯುವುದನ್ನು ರೂಢಿಸಿಕೊಳ್ಳುತ್ತಾರೆ. ಇದರಿಂದ ಕೃತಿಚೌರ್ಯದಂತಹ ಕೆಲಸಕ್ಕೆ ಯಾರೂ ಸಹ ಮುಂದಾಗುವುದಿಲ್ಲ ಎಂದು ಸಲಹೆ ನೀಡಿದರು.

ಹಿರಿಯ ಸಾಹಿತಿ ಡಾ.ಸಿ.ನಾಗಣ್ಣ, ಲೇಖಕ ಮೈಸೂರು ರಂಗನಾಥ್, ಕೃತಿಯ ಲೇಖಕಿ ಡಾ.ಕಲ್ಪನಾ ಮುಕುಂದ ಅಯ್ಯಂಗಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net