

ಕುಂದಾಪುರ: ಲಭ್ಯವಿರುವ ಇ-ಸಂಪನ್ಮೂಲ ಬಳಸಿಕೊಂಡು ಶಿಕ್ಷಕರು ಸೂಕ್ತ ರೀತಿಯಲ್ಲಿ ತಯಾರಿ ನಡೆಸಿದರೆ ತಮ್ಮ ಬೋಧನಾ ಗುಣಮಟ್ಟ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದು ತೀರ್ಥಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕಿ ಪ್ರೇಮಾ ಅಭಿಪ್ರಾಯಪಟ್ಟರು.
ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಂತರಿಕ ಗುಣಮಟ್ಟ ಭರವಸಾ ಕೋಶ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಒಂದು ದೇಶ ಒಂದು ಚಂದಾದಾರತ್ವ ವಿಚಾರವಾಗಿ ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಪ್ರಾಂಶುಪಾಲ ರಾಮರಾಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ನಾಗರಾಜ ಯು., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ.ಉಪಸ್ಥಿತರಿದ್ದರು. ಕಾಲೇಜಿನ ಗ್ರಂಥಪಾಲಕ ವೆಟರನ್ ರವಿಚಂದ್ರ ಎಚ್.ಎಸ್.ಸ್ವಾಗತಿಸಿದರು. ರಶ್ಮಿ ಉಡುಪ ಪ್ರಾರ್ಥಿಸಿದರು. ಚೇತನ್ ವಂದಿಸಿದರು. ಚೈತನ್ಯ ಕಾರ್ಯಕ್ರಮ ನಿರೂಪಿಸಿದರು.