ಶಿಥಿಲಾವಸ್ಥೆ ಕಟ್ಟಡದಲ್ಲೇ ಬೋಧನೆ

FotoJet
Published on

ಬಂಗಾರಪೇಟೆ: ತಾಲೂಕಿನ ಪಾಕರಹಳ್ಳಿಯ ಸರ್ಕಾರಿ ಶಾಲಾ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಕಟ್ಟಡ ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದ್ದು, ಜೀವ ಭಯದಲ್ಲೇ ಮಕ್ಕಳು ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ. ಬಡ ಮಕ್ಕಳು ಶಿಕ್ಷಣ ಕಲಿಯುವ ಸರ್ಕಾರಿ ಶಾಲಾ ಕಟ್ಟಡಗಳ ಸ್ಥಿತಿ ಅಯೋಮಯವಾಗಿದ್ದು, ಬಹಳಷ್ಟು ಕಟ್ಟಡಗಳು ಶಿಥಿಲಗೊಂಡಿದೆ. ಸರ್ಕಾರ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೋಟ್ಯಾಂತರ ರೂ. ಖರ್ಚು ಮಾಡುತ್ತಿದೆ. ಆದರೆ ಅಧಿಕಾರಿಗಳ ರ್ನಿಲಕ್ಷ$್ಯದಿಂದ ಯೋಜನೆಗಳು ಅರ್ಹರಿಗೆ ತಲುಪದೆ ಕಡೆಗಣಿಸಿರುವುದರಿಂದ ಸರ್ಕಾರಿ ಶಾಲೆಗಳೆಂದರೆ ಜನರು ಮೂಗು ಮುರಿದು ಹಿಂದೇಟು ಹಾಕುವಂತಹ ವಾತಾವರಣ ನಿಮಾರ್ಣವಾಗಿದೆ. ಶಾಲೆಯಲ್ಲಿ 1ರಿಂದ 5ನೇ ತರಗತಿಗೆ 22 ಮಕ್ಕಳು ದಾಖಲಾಗಿದ್ದು, ಕಲಿಕೆಗೆ ಎರಡು ಕೊಠಡಿಗಳಿದ್ದು, ಹೊರಗಡೆಯಿಂದ ಕಟ್ಟಡ ನೋಡಲು ಸುಂದರವಾಗಿ ಕಂಡರೂ ಒಂದು ಕಟ್ಟಡದ ಒಳಗಡೆ ಮೇಲ್ಛಾವಣಿ ಕಿತ್ತು ಬೀಳುತ್ತಿದ್ದು, ಗೋಡೆ ಬಿರುಕುಬಿಟ್ಟು ಇಂದೋ ನಾಳೆಯೋ ಬೀಳುವ

ಹಂತಕ್ಕೆ ತಲುಪಿದೆ.

ಶಾಲಾ ಶಿಕ್ಷಕಿ, ಮಕ್ಕಳ ಮೇಲೆ ಉದುರುತ್ತಿದ್ದ ಸಿಮೆಂಟ್​ ಪದರ ತೆರವು ಮಾಡಿ ಅಲ್ಪಸ್ವಲ್ಪ ಚೆನ್ನಾಗಿರುವ ಮೂಲೆಯೊಂದರಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ. ಮತ್ತೊಂದು ಕೋಣೆ ಸಹ ಶಿಥಿಲಗೊಂಡು ಮಳೆ ಬಂದರೆ ಸೋರುತ್ತಿದ್ದು, ಮಕ್ಕಳು ಪ್ರಾಣ ಭಯದಲ್ಲಿ ಕೂತು ಪಾಠ ಕೇಳಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ಬಂಗಾರಪೇಟೆ ತಾಲೂಕಿನಲ್ಲಿ ಸುಮಾರು 290 ಸರ್ಕಾರಿ ಶಾಲೆಗಳಿದ್ದು, ಇವುಗಳ ಪೈಕಿ 75ಕ್ಕೂ ಹೆಚ್ಚಿನ ಶಾಲಾ ಕಟ್ಟಡಗಳು ಶಿಥಿಲಗುಂಡಿವೆ. ಕಟ್ಟಡಗಳನ್ನು ದುರಸ್ತಿಪಡಿಸಲು ಶಿಕ್ಷಣ ಇಲಾಖೆ ಅಥವಾ ಗ್ರಾಮ ಪಂಚಾಯಿತಿಗಳು ಮುಂದಾಗದೆ ರ್ನಿಲಕ್ಷ್ಯಕ್ಕೆ ಒಳಗಾಗಿವೆ. ಇದರಿಂದಾಗಿ ವಿಧಿ ಇಲ್ಲದೆ ಮಕ್ಕಳು ಪ್ರಾಣ ಭಯದಲ್ಲಿಯೇ ವಿದ್ಯಾಭ್ಯಾಸ ಮಾಡಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ.

ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲ: ಗ್ರಾಮದ ಶಾಲಾ ಕೊಠಡಿಗಳ ಅವ್ಯವಸ್ಥೆಯ ಬಗ್ಗೆ ಶಿಕ್ಷಕರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಇತ್ತ ಮುಖ ಮಾಡಿಲ್ಲ. ಇತ್ತೀಚೆಗಷ್ಟ ತಾಲೂಕಿನ ದಾಸರಹೊಸಹಳ್ಳಿಯ ಅಂಗನವಾಡಿ ಕೇಂದ್ರದ ಮೇಲ್ಛಾವಣೆ ಸಿಮೆಂಟ್​ ಕುಸಿದು ನಾಲ್ಕು ಮಕ್ಕಳಿಗೆ ತೀವ್ರ ಗಾಯಗಳಾಗಿದ್ದಾಗ ಸ್ಥಳಕ್ಕೆ ಬಂದ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಕ್ಷೇತ್ರದಲ್ಲಿ ಶಿಥಿಲಾವ್ಯಸ್ಥೆ ತಲುಪಿರುವ ಅಂಗನವಾಡಿ ಮತ್ತು ಸರ್ಕಾರಿ ಶಾಲಾ ಕಟ್ಟಡಗಳ ವರದಿ ನೀಡಿದರೆ ಹೊಸ ಕಟ್ಟಡ ನಿಮಾರ್ಣ ಮಾಡಿಕೊಡುವುದಾಗಿ ಬಿಇಒ ಮತ್ತು ಸಿಡಿಪಿಒ ಅವರಿಗೆ ಸೂಚಿಸಿದ್ದರು. ಶಿಥಿಲಗೊಂಡು ಬೀಳುವ ಹಂತ ತಲುಪಿರುವ ಪಾಕರಹಳ್ಳಿ ಶಾಲೆಯ ಕಟ್ಟಡ ದುರಸ್ತಿಗೊಳಿಸಬೇಕು ಅಥವಾ ನೂತನ ಕಟ್ಟಡ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ದಾಖಲಾತಿ ಕುಸಿತ: ಪಾಕರಹಳ್ಳಿಯ ಸರ್ಕಾರಿ ಶಾಲಾ ಕಟ್ಟಡವು ಅವ್ಯವಸ್ಥೆಯಲ್ಲಿರುವುದರಿಂದ ಪಾಲಕರು ತಮ್ಮ ಮಕ್ಕಳನ್ನು ಗ್ರಾಮದ ಶಾಲೆಗೆ ದಾಖಲಿಸಲು ಹಿಂಜರಿಯುವಂತಾಗಿದೆ. ಜತೆಗೆ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಕುಸಿಯುತ್ತಿದೆ. ಸರ್ಕಾರ ಸಹ ಬಡ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು ಮುಂದಾಗಿದ್ದು, ಉಚಿತ ಪುಸ್ತಕ, ಬಟ್ಟೆ, ಊಟ ಇತ್ಯಾದಿ ನೀಡಿದರೆ, ಸಾಲದು ಸಮರ್ಪಕ ಕಟ್ಟಡವನ್ನೂ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

"ತಾಲೂಕಿನಲ್ಲಿ ಶಿಥಿಲಗೊಂಡಿರುವ ಕಟ್ಟಡಗಳನ್ನು ಪಟ್ಟಿ ಮಾಡಲಾಗಿದ್ದು, ಮೊದಲಿಗೆ 14 ಕಟ್ಟಡಗಳನ್ನು ರಿಪೇರಿ ಮಾಡಲಾಗುತ್ತಿದೆ. ಪಾಕರಹಳ್ಳಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ."

- ಗುರುಮೂರ್ತಿ ಕ್ಷೇತ್ರ ಶಿಕ್ಷಣಾಧಿಕಾರಿ ಬಂಗಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net