

ಬೆಳಗಾವಿ: ಶಿಕ್ಷಣ ಕೇವಲ ವರ್ಗಕೊಣೆಯ ಬೋಧನೆಯಲ್ಲ. ಅದು ವಿದ್ಯಾರ್ಥಿಯ ನಿತ್ಯ ಬದುಕಿನಲ್ಲಿ ಬರುವ ಸವಾಲು ಎದುರಿಸುವ ಜ್ಞಾನ, ತಾಳ್ಮೆ ಹಾಗೂ ತಂತ್ರಗಳನ್ನು ಸಿದ್ಧಪಡಿಸಿಕೊಳ್ಳವಂತೆ ತಯಾರಿಸುವ ಸಾಧನವಾಗಬೇಕು ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಹೇಳಿದರು.
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಈಚೆಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇಂದಿನ ಶಿಕ್ಷಣ ಚಟುವಟಿಕೆ ಆಧಾರಿತವಾಗಿರದೆ ವರ್ಗಕೋಣೆಗೆ ಸೀಮಿತವಾಗುತ್ತಿದೆ. ಶಿಕ್ಷಣದ ಕಲಿಕಾಂಶಗಳು ಅನುಭವಾತ್ಮಕವಾಗಿರಬೇಕು. ರಾಜ್ಯಶಾಸ್ತ್ರ ನಾಗರಿಕ ಸಮಾಜವನ್ನು ಮುನ್ನೆಡೆಸುವ ಸಾಮರ್ಥ್ಯ ಹೊಂದಿರುವ ವಿಷಯವಾಗಿದೆ. ಹೀಗಾಗಿ ಅಂತಹ ಗುರಿಗಳನ್ನು ಹೊಂದಿರುವ ಪಠ್ಯಕ್ರಮ ರಚನೆಯಾಗಬೇಕು ಎಂದರು.
ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎಚ್.ಎನ್. ನಾಗಮೋಹನದಾಸ್ ಮಾತನಾಡಿ, ಸಂವಿಧಾನ ಓದು ಪುಸ್ತಕದ ಮೂಲಕ ಭಾರತದ ಸಂವಿಧಾನದ ಆಶಯಗಳನ್ನು ಅನಾವರಣ ಮಾಡುವ ಕೆಲಸದಲ್ಲಿ ನಿರತನಾಗಿದ್ದು, ಸಂವಿಧಾನಿಕ ಮೌಲ್ಯಗಳನ್ನು ಬಿತ್ತುವ ಕೆಲಸವಾಗಬೇಕಾಗಿದೆ ಎಂದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಕಮಲಾಕ್ಷಿ ತಡಸದ ಮಾತನಾಡಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಲ್ಲಿ ಕೌಶಲ ಬೆಳೆಸುವಂತಹ ಶಿಕ್ಷಣ ನೀಡುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಹೊಸ ಪಠ್ಯಕ್ರಮ ರಚನೆ ಮಾಡಲಾಗುತ್ತಿದ್ದು, ಪ್ರಾಧ್ಯಾಪಕರು ಸಲಹೆ ಸೂಚನೆ ನೀಡುವಂತೆ ಕೋರಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ, ಪ್ರಾಚಾರ್ಯ ಪ್ರೊ.ಎಂ.ಜಿ. ಹೆಗಡೆ, ಪ್ರೊ.ವೈ.ಎಸ್. ಬಲವಂತಗೋಳ, ಡಾ.ವಿ.ಬಿ. ಪಾಟೀಲ, ಬಿ.ಜಿ. ಪಾಟೀಲ, ಡಾ.ರಮೇಶ ಎಂ.ಎನ್., ಡಾ.ಪ್ರಕಾಶ ಕಟ್ಟಿಮನಿ, ಡಾ.ಹನುಮಂತಪ್ಪ ಡಿ.ಜಿ. ಇತರರಿದ್ದರು.