

ಮೈಸೂರು: ಪದವಿಪೂರ್ವ ಹಂತದಲ್ಲಿ ವಿದ್ಯಾರ್ಥಿಗಳು ಮನಸ್ಸು ಹತೋಟಿಯಲ್ಲಿಟ್ಟುಕೊಳ್ಳುವುದು ದೊಡ್ಡ ಸವಾಲು ಎಂದು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.
ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ವೇದಿಕೆಯಿಂದ ನಜರ್‌ಬಾದ್‌ನ ಮಹಾರಾಜ ವಿಭಜಿತ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಿಂಗಳ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹದಿಹರೆಯದ ವಯಸ್ಸಿನಲ್ಲಿರುವ ವಿದ್ಯಾರ್ಥಿಗಳಿಗೆ ಪಠ್ಯಗಳ ಜತೆಗೆ ಬೇರೆ ಬೇರೆ ಆಸೆ, ಆಸಕ್ತಿ ಇರುತ್ತದೆ. ಮನಸ್ಸು ಚಂಚಲವಾಗಿರುತ್ತದೆ. ಅವರ ಮನಸ್ಸನ್ನು ಹತೋಟಿಗೆ ತಂದು ಬೋಧನೆ ಮಾಡುವುದು ಅಧ್ಯಾಪಕರಿಗೆ ಸವಾಲಿನ ಕೆಲಸವಾಗಿದೆ ಎಂದು ಅಭಿಪ್ರಾಯಿಸಿದರು.
ಲಕ್ಷ್ಮೀಶನ ಜೈಮಿನಿ ಭಾರತದ ಸೀತಾಪರಿತ್ಯಾಗ ಮತ್ತು ಕುಮಾರವ್ಯಾಸ ಭಾರತದ ಪಾಂಡವರ ಅಜ್ಞಾತವಾಸದ ಸಂದರ್ಭದ ದ್ರೌಪದಿವಿಲಾಪ ಕುರಿತು ಮಾತನಾಡಿದ ಅವರು, ಕುಮಾರವ್ಯಾಸ ಭಾರತ ಮತ್ತು ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಸ್ತ್ರೀ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಆ ಪಾತ್ರಗಳಿಗೆ ವಿಶೇಷವಾಗಿ ಜೀವ ತುಂಬಿರುವುದು ಪ್ರಶಂಸನೀಯ ವಿಚಾರ ಎಂದರು.
ಸಮಾಜದಲ್ಲಿ ಮಾತೃ ಪ್ರಧಾನ ವ್ಯವಸ್ಥೆ ಎಲ್ಲಿ ಇರುತ್ತದೆಯೋ ಅಲ್ಲಿ ಸಹಜವಾಗಿ ಜೀವಂತಿಕೆ ಇರುತ್ತದೆ. ತಾಯಿ ಎಂದರೆ ಕಲ್ಮಶವನ್ನು ಬಾಚಿ ಹಾಲುಣಿಸುವ ಸಹಜ ಪ್ರಕ್ರಿಯೆಯೇ ಮಾತೆ. ಜೈನ ಪರಂಪರೆಯ ಕಾವ್ಯಗಳಲ್ಲಿ ಹೆಣ್ಣಿಗೆ ಮೋಕ್ಷವಿಲ್ಲ, ಅಸ್ತಿತ್ವವಿಲ್ಲ. ಆದರೆ, ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಬರುವ ಸೀತಪರಿತ್ಯಾಗ ಅತ್ಯಂತ ಮನಮೋಹಕವಾಗಿ ಮೂಡಿಬಂದಿದೆ ಎಂದು ಹೇಳಿದರು.
ಕುಮಾರವ್ಯಾಸನ ಭಾರತದಲ್ಲಿ ದ್ರೌಪದಿಯ ಪಾತ್ರ ಜೀವಂತವಾದ ವ್ಯಕ್ತಿಯಾಗಿ ತನ್ನ ಮನೋಭಾವವನ್ನು, ಸ್ಥಿರವಾದ ಮನಸ್ಸನ್ನು ವ್ಯಕ್ತಪಡಿಸುವ ಸ್ವಾಭಿಮಾನದ ಹೆಣ್ಣಾಗಿ ಚಿತ್ರಿತವಾಗಿರುವುದು ಕುಮಾರವ್ಯಾಸನ ಕಾವ್ಯಗಳಿಗೆ ಹೆಚ್ಚಿನ ಮೆರಗನ್ನು ತರುವಲ್ಲಿ ಯಶಸ್ವಿಯಾಗಿದೆ. ಈ ಎರಡು ಕಾವ್ಯಗಳಲ್ಲಿ ಸ್ತ್ರೀ ಪಾತ್ರಗಳನ್ನು ಸಶಕ್ತವಾಗಿ ಎಲ್ಲರಿಗೂ ಮನಮೆಚ್ಚುವಂತೆ ಪರಿಚಯಿಸಿರುವುದು ಅತ್ಯಂತ ಸಂತಸದ ಸಂಗತಿ ಎಂದರು.
ವರ್ಗಾವಣೆಗೊಂಡ ಉಪನ್ಯಾಸಕರಾದ ರೇಣುಕಾರಾಧ್ಯ ಮತ್ತು ಸಾಹಿತಿ ವೆಂಕಟರಮಣ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಉಪನ್ಯಾಸಕ ವೇದಿಕೆ ಅಧ್ಯಕ್ಷ ಎಂ.ಮಹೇಶ್, ಬಿ.ಅಶೋಕ, ಪ್ರಾಂಶುಪಾಲರಾದ ಬಾಲಸುಬ್ರಮಣ್ಯಂ, ಡಾ.ಸಂತೋಷ್ ಚೊಕ್ಕಾಡಿ, ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ರಾಜೇಶ್ವರಿ, ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಎಂ.ಮಹದೇವ, ಪ್ರಧಾನ ಕಾರ್ಯದರ್ಶಿ ಕೆಂಪಯ್ಯ, ಡಾ.ಉಮೇಶ್ ಬೇವಿನಹಳ್ಳಿ, ಉಪನ್ಯಾಸಕರಾದ ಕೆ.ಮಾಲತಿ, ಸುಧಾಕರ್ ಮತ್ತಿತರರು ಹಾಜರಿದ್ದರು.