‘ವಿಜಯವಾಣಿ’ ಮುದ್ರಣ ವೀಕ್ಷಿಸಿದ ಶಿಕ್ಷಕರು

New Press Visit New
Published on

ಹುಬ್ಬಳ್ಳಿ : ವಿದ್ಯಾರ್ಥಿಗಳನ್ನು ತಿದ್ದಿ, ತೀಡಿ ಉತ್ತಮ ಭವಿಷ್ಯ ರೂಪಿಸುವಲ್ಲಿ ಶ್ರಮಿಸುವ ಶಿಕ್ಷಕರು ಇಲ್ಲಿಗೆ ಸಮೀಪದ ವರೂರಿನಲ್ಲಿರುವ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿಯ ಮುದ್ರಣ ಘಟಕಕ್ಕೆ ಭೇಟಿ ನೀಡುವ ಮೂಲಕ ಹೊಸ ಅನುಭವ ಪಡೆದುಕೊಂಡರು.

ಶಿಕ್ಷಕರ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯ ವಿವಿಧ ಪ್ರಾಥಮಿಕ, ಪ್ರೌಢ ಶಾಲೆಗಳ ಹಾಗೂ ಐಟಿಐ ಕಾಲೇಜುಗಳ ಶಿಕ್ಷಕರು ಪತ್ರಿಕೆ ಮುದ್ರಣಗೊಳ್ಳುವ ವಿವಿಧ ಹಂತಗಳ ಮಾಹಿತಿ ತಮ್ಮದಾಗಿಸಿಕೊಂಡರು.

ಒಂದು ದಿನಪತ್ರಿಕೆ ಮುದ್ರಿಸಲು ಎಷ್ಟು ಶ್ರಮವಹಿಸಬೇಕು ?, ಯಾವ ಯಾವ ಹಂತಗಳನ್ನು ದಾಟಿ ಮುದ್ರಣಕ್ಕೆ ಹೋಗಬೇಕು ?, ಮುದ್ರಣಗೊಂಡ ನಂತರ ಯಾವ ರೀತಿ ನಮ್ಮ ಮನೆ ಬಾಗಿಲಿಗೆ ಪತ್ರಿಕೆ ತಲುಪುತ್ತದೆ ?, ಮುದ್ರಣಕ್ಕೆ ತಗಲುವ ವೆಚ್ಚ ಎಂಬೆಲ್ಲ ಮಾಹಿತಿಗಳನ್ನು ಶಿಕ್ಷಕರು ವಿಸ್ತಾರವಾಗಿ ಪಡೆದುಕೊಂಡರು.

ಶಾಲೆಗಳಲ್ಲಿ ಬೆಳಗ್ಗೆ ಪ್ರಾರ್ಥನೆ ಸಮಯದಲ್ಲಿ ಪತ್ರಿಕೆಯ ಪ್ರಮುಖ ಸುದ್ದಿಗಳನ್ನು ಓದುವ ವಿದ್ಯಾರ್ಥಿಗಳಿಗೂ ದಿನಪತ್ರಿಕೆ ಹೊರತರುವ ಹಿಂದಿರುವ ಶ್ರಮದ ಬಗ್ಗೆ ಮಾಹಿತಿ ಇರುವುದಿಲ್ಲ. ವಿಜಯವಾಣಿ ಮುದ್ರಣ ವಿಭಾಗದಲ್ಲಿ ಪತ್ರಿಕೆ ಮುದ್ರಣಗೊಳ್ಳುವ ವಿವಿಧ ಹಂತಗಳನ್ನು ವೀಕ್ಷಿಸಿದ ಶಿಕ್ಷಕರು, ತಮ್ಮ ವಿದ್ಯಾರ್ಥಿಗಳಿಗೆ ಈ ಎಲ್ಲ ಮಾಹಿತಿಯನ್ನು ಮನದಟ್ಟು ಮಾಡುವುದಾಗಿ ಹೇಳಿದರು.

ನಿತ್ಯವೂ ಮನೆಗೆ ಬರುವ ವಿಜಯವಾಣಿ ಪತ್ರಿಕೆ ಹಾಗೂ ಅದರ ವಿಷಯ ವಸ್ತುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿಕ್ಷಕರು, ಪೇಪರ್ ಮುದ್ರಣ ಆಗುವ ವಿಧಾನ ಕಣ್ಣಾರೆ ಕಂಡು ಅಚ್ಚರಿ ವ್ಯಕ್ತಪಡಿಸಿದರು. ಮುದ್ರಣದ ಪ್ರತಿ ಹಂತವನ್ನು ಕುತೂಹಲದಿಂದ ವೀಕ್ಷಿಸಿದರು. ಪತ್ರಿಕೆ ಮುದ್ರಣಕ್ಕೆ ಬಳಸಲಾಗುವ ಹೊಸ ತಂತ್ರಜ್ಞಾನ, ಬಣ್ಣಗಳ ವಿಶೇಷತೆಗಳನ್ನು ನೋಡಿ ಸಂತಸ ವ್ಯಕ್ತಪಡಿಸಿದರು.

ದೇಶದ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವುದು ಹಾಗೂ ಮಹಿಳೆಯರ ಸಶಕ್ತಿಕರಣಕ್ಕೆ ವಿಜಯವಾಣಿ ಸದಾ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಸ್ಪರ್ಧೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸುವ ಜತೆಗೆ ವಿದ್ಯಾರ್ಥಿ ಮಿತ್ರ ಪತ್ರಿಕೆ ಹೊರತುವ ಮೂಲಕ ಪತ್ರಿಕೆಗೆ ವಿದ್ಯಾರ್ಥಿಗಳ ಬಗ್ಗೆ ಇರುವ ಕಾಳಜಿಯನ್ನು ವ್ಯಕ್ತಪಡಿಸುತ್ತದೆ ಎಂದು ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಹಲವು ಕಾರ್ಯಕ್ರಮಗಳನ್ನು ಮಹಿಳೆಯರಿಗಾಗಿಯೇ ಆಯೋಜನೆ ಮಾಡಿ, ಪ್ರೋತ್ಸಾಹ ನೀಡುತ್ತಿದೆ. ಇದೀಗ ಪತ್ರಿಕೆ ಮುದ್ರಣದ ಮಜಲುಗಳನ್ನು ವೀಕ್ಷಿಸಲು ಅವಕಾಶ ನೀಡಿ, ನಮಗೆ ಹೊಸ ಲೋಕದ ಅನುಭವ ನೀಡಿದೆ ಎಂದು ಶಿಕ್ಷಕರು ಅಭಿಪ್ರಾಯ ಹಂಚಿಕೊಂಡರು.

ಶಿಕ್ಷಣ ಇಲಾಖೆ ಆಯುಕ್ತ ಡಾ. ಉಳ್ಳಾಗಡ್ಡಿ ಭೇಟಿ : ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ ವಿಭಾಗದ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರು ಸಹ ಶಿಕ್ಷಕರೊಂದಿಗೆ ವಿಜಯವಾಣಿ ದಿನಪತ್ರಿಕೆಯ ವರೂರು ಮುದ್ರಣ ವಿಭಾಗಕ್ಕೆ ಭೇಟಿ ನೀಡಿ, ಮುದ್ರಣದ ಪ್ರತಿಯೊಂದ ಹಂತದ ಮಾಹಿತಿ ಪಡೆದುಕೊಂಡರು.

ತಮ್ಮ ಇಲಾಖೆಯ ಆಯುಕ್ತರು ಸಹ ತಮ್ಮೊಂದಿಗೆ ಇದ್ದದ್ದು ಶಿಕ್ಷಕರನ್ನು ಮತ್ತಷ್ಟು ಪುಳಕಿತರನ್ನಾಗಿಸಿತು. ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರು ಶಿಕ್ಷಕರೊಂದಿಗೆ ಬೆರೆತು, ಅತ್ಯಾಧುನಿಕ ಡಿಜಿಟಲ್ ಉಪಕರಣದಿಂದ ಪ್ಲೇಟ್ ತಯಾರಿಸುವ ವಿಧಾನ, ಪತ್ರಿಕೆ ಮುದ್ರಣಕ್ಕೆ ರಷ್ಯಾದಿಂದ ಬರುವ ಗುಣಮಟ್ಟದ ಪೇಪರ್ ಬಂಡಲ್, ಪ್ರಿಂಟಿಂಗ್ ಮಷಿನ್​ಗಳನ್ನು ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net