ಮಕ್ಕಳ ಅಸಾಧಾರಣ ಪ್ರತಿಭೆಗೆ ಮಾರುಹೋದ ಶಿಕ್ಷಕರು

prathiba karanji
Published on

ಮಡಿಕೇರಿ: ಮಡಿಕೇರಿಯ ಸಂತ ಮೈಕೆಲರ ಪ್ರೌಢಶಾಲೆಯಲ್ಲಿ ನೂರಾರು ಮಕ್ಕಳು ತಮ್ಮ ಕಲೆಯನ್ನು ಪ್ರದರ್ಶಿಸಿದರು. ಮಕ್ಕಳ ಅಸಾಧಾರಣ ಪ್ರತಿಭೆಗೆ ಶಿಕ್ಷಕರೂ ಮಾರು ಹೋದರು. ಇಡೀ ದಿನ ಸಾಂಸ್ಕೃತಿಕಮಯ ವಾತಾವರಣದಲ್ಲಿ ಮಡಿಕೇರಿ ತಾಲೂಕಿನ ಶಾಲಾ ಮಕ್ಕಳು ಖುಷಿಪಟ್ಟರು.


ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಮಡಿಕೇರಿ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳಲ್ಲಿ ೧೩ ಕ್ಲಸ್ಟರ್‌ಗಳ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಸಾಮೂಹಿಕ ಹಾಗೂ ವೈಯುಕ್ತಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.


ತಾಲೂಕಿನ ವಿವಿಧ ಶಾಲಾ, ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಜನಪದ ನೃತ್ಯ, ಮಣ್ಣಿನ ಮಾದರಿ ತಯಾರಿ, ರಸಪ್ರಶ್ನೆ ಸ್ಪರ್ಧೆ, ಮಿಮಿಕ್ರಿ ಆಶುಭಾಷಣ, ಭಾಷಣ, ರಂಗೋಲಿ, ಛದ್ಮವೇಷ, ಧಾರ್ಮಿಕ ಪಠಣ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದು ಗಮನ ಸೆಳೆದರು.


ಮಡಿಕೇರಿ, ಚೇರಂಬಾಣೆ, ಭಾಗಮಂಡಲ, ಸಂಪಾಜೆ, ಮೂರ್ನಾಡು, ಮೇಕೇರಿ ಸೇರಿದಂತೆ ವಿವಿಧ ಕ್ಲಸ್ಟರ್‌ಗಳ ವಿದ್ಯಾರ್ಥಿಗಳು ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಕ್ಲಸ್ಟರ್ ಹಂತದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.


ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂತ ಮೈಕೆಲರ ಪ್ರೌಢಶಾಲೆಯ ಸಂಚಾಲಕ ಫಾದರ್ ನವೀನ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸಲು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳು ಸಹಕಾರಿ ಎಂದರು.


ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎಸ್.ರವಿಕೃಷ್ಣ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗಾಗಿ ಶಿಕ್ಷಕರು ಶ್ರಮಿಸುತ್ತಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.


ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಬಿ.ಸಿ.ದೊಡ್ಡೇಗೌಡ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ತನ್ನದೇ ಆದ ಪ್ರತಿಭೆ ಇರುತ್ತದೆ. ಮಕ್ಕಳ ಪ್ರತಿಭೆ ಹೊರಹೊಮ್ಮಿಸಲು ಶಿಕ್ಷಕರು ನೆರವಾಗಬೇಕು ಎಂದರು.


ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಡಗು ಜಿಲ್ಲಾಧ್ಯಕ್ಷ ಪೊನ್ನಚನ ಶ್ರೀನಿವಾಸ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ ಮಡಿಕೇರಿ ತಾಲೂಕು ಅಧ್ಯಕ್ಷ ಮೋಹನ್ ಪೆರಾಜೆ, ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರ ಸಂಘದ ಅಧ್ಯಕ್ಷ ಕೆ.ಶಿವಪ್ರಸಾದ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಪಿ.ಗುರುರಾಜ್, ಇಸಿಒ ಹರೀಶ್, ಬಿಆರ್‌ಪಿ ಮಂಜುಳಾ ಚಿತ್ರಾಪುರ, ವಿವಿಧ ಕ್ಲಸ್ಟರ್‌ಗಳ ಸಿಆರ್‌ಪಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net