

ಅರಕೇರಾ: ತಾಲೂಕಿನ ಶಿವಂಗಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಶಿಕ್ಷಕ ಲೋಕೇಶ ಶಿವಣಗಿ ವರ್ಗಾವಣೆಯಿಂದ ಶಾಲೆ ಮಕ್ಕಳು ಶನಿವಾರ ಭಾವುಕರಾದರು.
ಶಾಲೆಯಲ್ಲಿ 16 ವರ್ಷ ಸೇವೆ ಸಲ್ಲಿಸಿ ತವರು ಜಿಲ್ಲೆ ವಿಜಯಪುರ ತಾಲೂಕಿನ ಸಿಂಧಗಿಯ ಕೋಕಟನೂರು ಸರ್ಕಾರಿ ಪ್ರೌಢ ಶಾಲೆಗೆ ವರ್ಗವಾಗಿದ್ದಾರೆ. ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಶಾಲೆಯಲ್ಲಿ ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮಕ್ಕಳೊಂದಿಗೆ ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದರು. ಶಾಲೆಯಿಂದ ಶಿಕ್ಷಕರು ವರ್ಗಾವಣೆ ಬೇಸರ ತಂದಿದೆ ಎಂದು ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಲೆ ತಮ್ಮ ಅಳಲು ವ್ಯಕ್ತಪಡಿಸಿದರು. ಅವರೊಂದಿಗೆ ಶಿಕ್ಷಕರೂ ಭಾವುಕರಾದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಶಾಲೆಯಲ್ಲಿ 16 ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದೇನೆ. ಶಿವಂಗಿ ಗ್ರಾಮದಲ್ಲಿ ಸೇವೆ ಸಲ್ಲಿಸಿರುವ ದಿನಗಳು ಅವಿಸ್ಮರಣೀಯ. ಮಕ್ಕಳು ಭಾವುಕರಾದ ಕ್ಷಣಗಳು ನನಗೆ ಎಲ್ಲ ಪ್ರಶಸ್ತಿಗಿಂತ ಮಿಗಿಲಾಗಿದೆ. ವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ, ಸಮಯ ಪಾಲನೆ ಇಂತಹ ಪ್ರಸಂಗಗಳಿಗೆ ಸಾಕ್ಷಿಯಾಗಿವೆ. ಇಲ್ಲಿ ಸೇವೆ ಸಲ್ಲಿಸುವ ವೇಳೆ ಎಸ್ಡಿಎಂಸಿ, ಸಹೋದ್ಯೋಗಿಗಳು, ಮಕ್ಕಳು, ಗ್ರಾಮಸ್ಥರ ಸಹಕಾರ, ಉತ್ತಮ ಒಡನಾಟ ಮರೆಯುವಂತಿಲ್ಲ.
ಲೋಕೇಶ ಶಿವಣಗಿ
ವರ್ಗಾವಣೆಗೊಂಡ ಶಿಕ್ಷಕ.