ಶಿಕ್ಷಕರು ಕಲಿಕಾ ನಿರಂತರತೆ ಕಾಯ್ದುಕೊಳ್ಳಲು: ಶೋಭಾ ಕರೆ

MDK01
Published on

ಮಡಿಕೇರಿ: ಶಿಕ್ಷಕರು ಕಲಿಕಾ ನಿರಂತರತೆ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ (ಡಿವೈಪಿಸಿ) ಜಿ.ಶೋಭಾ ಹೇಳಿದರು.


ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ, ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಶಿಕ್ಷಕರ ಕಲ್ಯಾಣ ನಿಧಿಯಿಂದ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದರು.


ಶಿಕ್ಷಕರು ನಿರಂತರ ವಿದ್ಯಾರ್ಥಿಯಾಗಿದ್ದು, ನಿತ್ಯ ಕಲಿಕೆಯೇ ಬಂಡವಾಳ. ಶಿಕ್ಷಕರು ಹೊಸ ಹೊಸ ವಿಷಯಗಳನ್ನು ಅಭ್ಯಾಸ ಮಾಡುವ ಮೂಲಕ ಕಲಿಕಾ ನಿರಂತರತೆಯನ್ನು ಕಾಯ್ದುಕೊಳ್ಳುವುದರಿಂದ ಹೆಚ್ಚು ಕ್ರಿಯಾಶೀಲತೆ, ಸೃಜನಶೀಲತೆ ಬೆಳೆಯುತ್ತದೆ. ಇದಕ್ಕೆ ಸಹ-ಪಠ್ಯ ಚಟುವಟಿಕೆ ಸ್ಪರ್ಧೆಗಳೂ ಸಹಾಯಕವಾಗಿದ್ದು, ಇವುಗಳಲ್ಲಿ ಶಿಕ್ಷಕರು ಭಾಗವಹಿಸಬೇಕು. ಇದರಿಂದ ದೈಹಿಕ, ಮಾನಸಿಕ ಜ್ಞಾನವೂ ವೃದ್ಧಿಸಲಿದ್ದು, ಪಾಠ ಭೋದನೆಗೂ ಸಹಕಾರಿಯಾಗುತ್ತದೆ ಎಂದರು.


ಶಿಕ್ಷಕರು ತಮ್ಮ ವೃತ್ತಿ ಬೋಧನೆಯೊಂದಿಗೆ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹ ಸ್ಪರ್ಧೆಗಳು ಸಹಕಾರಿಯಾಗಿವೆ. ಸದಾ ಮಕ್ಕಳ ಕಲಿಕೆ ಹಾಗೂ ಪ್ರತಿಭೆಗೆ ಪ್ರೋತ್ಸಾಹ ನೀಡುವ ಶಿಕ್ಷಕರು ಕೆಲಸದ ಒತ್ತಡದ ನಡುವೆ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಪ್ರತಿಯೊಬ್ಬ ಶಿಕ್ಷಕರಲ್ಲೂ ವಿಶೇಷ ಪ್ರತಿಭೆ ಇರುತ್ತದೆ ಎಂದು ಶೋಭಾ ಹೇಳಿದರು.


ಸ್ಪರ್ಧಾ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಕೆ.ಆರ್.ಬಿಂದು ಮಾತನಾಡಿದರು. ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಬಿ.ಸಿ.ದೊಡ್ಡೇಗೌಡ, ಶಿಕ್ಷಣ ಸಂಯೋಜಕರಾದ ಕೆ.ಬಿ.ರಾಧಾಕೃಷ್ಣ, ಎಂ.ಎಚ್.ಹರೀಶ್, ಪಿ.ಎಂ.ಅಯ್ಯಪ್ಪ, ಚಿತ್ರಕಲಾ ಶಿಕ್ಷಕ ಉ.ರಾ.ನಾಗೇಶ್ ಇದ್ದರು.


ಶಿಕ್ಷಕರಿಗೆ ಸ್ಥಳದಲ್ಲೇ ಪಾಠೋಪಕರಣಗಳ ತಯಾರಿಕೆ, ವಿಜ್ಞಾನ ಮತ್ತು ಸಾಮಾನ್ಯ ರಸಪ್ರಶ್ನೆ ಸ್ಪರ್ಧೆ, ಚಿತ್ರಕಲೆ, ಪ್ರಬಂಧ, ಆಶುಭಾಷಣ ಹಾಗೂ ಭಕ್ತಿಗೀತೆ ಗಾಯನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶಾಲೆಯ ಕರ್ತವ್ಯದ ಒತ್ತಡದಿಂದ ದಿನನಿತ್ಯ ಕೆಲಸದಲ್ಲಿ ತೊಡಗುತ್ತಿದ್ದ ಶಿಕ್ಷಕರು ಮಕ್ಕಳು ಸ್ಪರ್ಧಿಸುವಂತೆ ಶಿಕ್ಷಕರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಹೊರಹಾಕಿದರು.


ಜಿಲ್ಲೆಯ ಮೂರು ತಾಲೂಕುಗಳಿಂದ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಿಗಳು ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಶಿಕ್ಷಕರು ಸ್ಥಳದಲ್ಲೇ ತಯಾರಿಸಿದ ಪಾಠೋಪಕರಣಗಳ ತಯಾರಿಕೆ ಹಾಗೂ ಚಿತ್ರಗಳು ಗಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net