ವಿದ್ಯಾರ್ಥಿಗಳು-ಶಿಕ್ಷಕರಲ್ಲಿ ಕರೊನಾ ಸೋಂಕು ಪತ್ತೆ

DC Dr.Bagadi Goutham
Published on

ಚಿಕ್ಕಮಗಳೂರು: ಶಾಲಾ ಕಾಲೇಜುಗಳು ಆರಂಭಗೊಂಡ ಬಳಿಕ ನಾಲ್ವರು ವಿದ್ಯಾರ್ಥಿಗಳು ಹಾಗೂ ಐವರು ಶಿಕ್ಷಕರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಗಾದಿ ಗೌತಮ್ ತಿಳಿಸಿದರು.

ಮಂಗಳವಾರ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಅವರು, ಕರೊನಾ ಸೋಂಕಿನ ಲಕ್ಷಣಗಳು ಕಂಡು ಬರುವ ಎಲ್ಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದಲ್ಲದೆ ರೋಗ ಲಕ್ಷಣ ಗೋಚರವಾಗದಿರುವ ಸೋಂಕಿತರನ್ನು ಹಾಗೂ ಸ್ವಯಂ ಪ್ರೇರಿತವಾಗಿ ಬರುವವರನ್ನು ಸಹ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ನಿತ್ಯ 1300 ಆರ್‍ಟಿಪಿಸಿಆರ್ ಟೆಸ್ಟ್ ಮಾಡಬೇಕೆಂಬ ಗುರಿ ನಿಗದಿಪಡಿಸಲಾಗಿದೆ. ಆದರೆ ಸುಮಾರು 3000 ಪರೀಕ್ಷೆಗಳನ್ನು ಪ್ರತಿದಿನ ನಡೆಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕರೊನಾ ಸೋಂಕಿತ ಪ್ರಕರಣಗಳು ಕ್ಷೀಣಿಸಿದ್ದು, ದಿನವಹಿ ಸರಾಸರಿ 10ರಷ್ಟು ಪ್ರಕರಣಗಳು ಮಾತ್ರ ವರದಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕವುಂಟು ಮಾಡಿದೆ.

ಈ ನಡುವೆ ಕರೊನಾ ಕಾರಣಕ್ಕೆ ಮುಚ್ಚಲಾಗಿದ್ದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯು ಕಾಲೇಜುಗಳನ್ನು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳ ಹಿಂದಷ್ಟೇ ಮರು ಆರಂಭಗೊಳಿಸಿದ್ದು, ಮೊದಲ ದಿನವೇ ಕಳಸದ ಖಾಸಗಿ ಶಾಲೆಯ ಇಬ್ಬರು ಶಿಕ್ಷಕರಲ್ಲಿ ಸೋಂಕಿರುವುದು ದೃಢಪಟ್ಟಿತ್ತು.

ತಪಾಸಣೆಗೆ ಒಳಗಾಗಿದ್ದ ಈ ಇಬ್ಬರು ಶಿಕ್ಷಕರು ಪರೀಕ್ಷಾ ವರದಿ ಕೈಸೇರುವುದಕ್ಕೆ ಮುನ್ನವೇ ಒಂದು ದಿನ ತರಗತಿಯಲ್ಲಿ ಪಾಠ ಮಾಡಿದ್ದರು. ಮರುದಿನ ಅವರ ಪರೀಕ್ಷಾ ವರದಿ ಬಂದಾಗ ಪಾಸಿಟಿವ್ ಇರುವುದು ತಿಳಿದು ಬಂದಿತ್ತು. ಶಾಲೆಯನ್ನು ಮತ್ತೆ ಮುಚ್ಚಲಾಗಿದ್ದು, ಶಾಲಾಡಳಿತ ಮಂಡಳಿ ಮತ್ತು ಶಿಕ್ಷಕರ ಬೇಜಬ್ದಾರಿತನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net