ಬಿಇಒ ಮುಂದೆ ಅಳಲು ತೋಡಿಕೊಂಡ ಶಿಕ್ಷಕರು

98e53a16-f265-435d-b8fe-d2cdd7e47271
ಸೋಮವಾರಪೇಟೆ ಬಿಇಒ ಕಚೇರಿ ಮುಂಭಾಗ ಶಿಕ್ಷಕರ ಸಂಘದ ಪದಾಧಿಕಾರಿಗಳು ಜಾತಿಜನಗಣತಿಯ ಸಮಸ್ಯೆಯನ್ನು ಹೇಳಿಕೊಂಡರು. ಮಂಜುನಾಥ್, ಪ್ರಸನ್ನ , ಬಸವರಾಜ ಇದ್ದರು.
Published on

ಸೋಮವಾರಪೇಟೆ: ಗಣತಿ ಕಾರ್ಯ ಪೂರೈಸಿರುವ ಮತ್ತು ಶೇ.80-90 ರಷ್ಟು ಗಣತಿ ಮುಗಿಸಿರುವ ಗಣತಿದಾರ ಶಿಕ್ಷಕರಿಗೆ ಕಾರಣ ಇಲ್ಲದೆ ನೋಟಿಸ್ ನೀಡಿರುವುದನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಸೋಮವಾರ ಸೋಮವಾರಪೇಟೆಯಲ್ಲಿ ಬಿಇಒ ಕಚೇರಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ಮನವಿ ಸಲ್ಲಿಸಿದರು.

ದಸರಾ ರಜೆಯಲ್ಲಿ ಬಿಸಿಲು-ಮಳೆ ಎನ್ನದೆ ಬೆಳಗ್ಗೆ 7ರಿಂದ ರಾತ್ರಿ 9 ರವರೆಗೂ ಮನೆ, ಮನೆ ಅಲೆದು ಸಮೀಕ್ಷೆ ನಡೆಸಿದರೂ ಮನೆಗಳು ಸಿಗದಿರುವುದರಿಂದ (ನಂಬರ್‌ಗಳ ದೋಷ) ಸಮೀಕ್ಷಾ ಕಾರ್ಯ ಕುಂಠಿತಗೊಂಡಿದೆ. ಆದರೂ ಮೇಲಧಿಕಾರಿಗಳು ಶಿಕ್ಷಕರಿಗೆ ನೀಡಿರುವ ನೋಟಿಸ್‌ನಿಂದ ಶಿಕ್ಷಕರು ಮಾನಸಿಕವಾಗಿ ಕುಗ್ಗಿದ್ದು ಮಾನಸಿಕ ಖಿನ್ನತೆಗೆ ಒಳಗಾಗುವ ಪರಿಸ್ಥಿತಿ ಬಂದೊದಗಿದೆ ಎಂದು ಗಣತಿದಾರ ಶಿಕ್ಷಕರು ಬಿಇಒ ಮುಂದೆ ಅಳಲು ತೋಡಿಕೊಂಡರು.

ಸಮೀಕ್ಷೆಯನ್ನು ತಮ್ಮ ಮಕ್ಕಳು ಮತ್ತು ಕುಟುಂಬದ ಸದಸ್ಯರ ನೆರವಿನಿಂದ ಈಗಾಗಲೇ ಶೇ.75ರಿಂದ 85 ಪೂರ್ಣಗೊಳಿಸಿದ್ದರೂ ನೋಟಿಸ್ ನೀಡಿರುವುದು ತುಂಬ ನೋವು ತಂದಿದೆ ಎಂದು ಶಿಕ್ಷಕರು ಸಮಸ್ಯೆಯನ್ನು ಹೇಳಿಕೊಂಡರು.

ಗಣತಿದಾರ ಶಿಕ್ಷಕರಿಗೆ ನೀಡಿರುವ ನೋಟಿಸ್‌ಅನ್ನು ಹಿಂದಕ್ಕೆ ಪಡೆಯುವುದು ಸೇರಿದಂತೆ ಗಣತಿ ಕಾರ್ಯವನ್ನು ಕೆಲದಿನಗಳ ಕಾಲ ಮುಂದೂಡುವಂತೆ ಹಾಗೂ ಗಣತಿ ಕಾರ್ಯದ ನೆಪವೊಡ್ಡಿ ಶಿಕ್ಷಕರಿಗೆ ಅನವಶ್ಯಕವಾಗಿ ನೀಡಿರುವ ನೋಟಿಸ್‌ಗಳನ್ನು ಹಿಂದಕ್ಕೆ ಪಡೆದು ಗಣತಿದಾರರು ಸಮೀಕ್ಷಾ ಸ್ಥಳದಲ್ಲಿ ನೈಜವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ ಗಣತಿ ಕಾರ್ಯವನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಕೃಷ್ಣಮೂರ್ತಿ ಹಾಗೂ ಬಿಇಒ ಎಂ.ಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಿದ ಶಿಕ್ಷಕರ ಸಂಘಗಳ ಪದಾಧಿಕಾರಿಗಳು ಈ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯುವಂತೆ ಕೋರಿದರು.

ಗಣತಿದಾರರ ನೈಜ ಸಮಸ್ಯೆಗಳನ್ನು ಅರಿಯಲು ಜಿಲ್ಲಾ ಹಾಗೂ ತಾಲೂಕು ಹಂತದ ಅಧಿಕಾರಿಗಳು ಸಮೀಕ್ಷಾ ಸ್ಥಳಕ್ಕೆ ಭೇಟಿ ನೀಡಬೇಕು. ಸಮೀಕ್ಷೆ ವೇಳೆಯಲ್ಲಿ ಮನೆಗಳು ಸಿಗದೆ ಪರದಾಡುತ್ತಿರುವ ಗಣತಿದಾರರ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಖುದ್ದು ಸ್ಥಳಕ್ಕೆ ಧಾವಿಸಿದರೆ ಮಾತ್ರ ಸಮೀಕ್ಷೆಯ ತಾಂತ್ರಿಕ ತೊಂದರೆಗಳ ಸತ್ಯಾಂಶವನ್ನು ತಿಳಿಯಲು ಸಾಧ್ಯ ಎಂದು ಅಹವಾಲನ್ನು ಹೇಳಿಕೊಂಡರು.

ಗಣತಿ ಸಮೀಕ್ಷೆಯಲ್ಲಿ ಶೇ.25ರಿಂದ 30ರಷ್ಟು ವಸತಿ ರಹಿತ ಖಾಲಿ ಮನೆಗಳು ಸೇರಿದಂತೆ ವಾಣಿಜ್ಯ ಮಳಿಗೆಗಳು, ಅಂಗಡಿ ಮುಗ್ಗಟ್ಟು ಸೇರಿದಂತೆ ಇತರ ಕಟ್ಟಡಗಳಿದ್ದರೂ ಅವುಗಳಿಗೂ ಯು.ಎಚ್.ಐ.ಡಿ. ಸ್ಟಿಕ್ಕರ್ಸ್‌ಗಳನ್ನು ಅಂಟಿಸಿರುವುದರಿಂದ ಖಾಲಿ ಮನೆಗಳ ಸಂಖ್ಯೆಯೇ ಹೆಚ್ಚಾಗಿ ಕಂಡುಬಂದರೂ ಅವುಗಳನ್ನು ಸಮೀಕ್ಷೆಗೆ ನಿಗದಿಪಡಿಸಿರುವ ಪಟ್ಟಿಯಿಂದ ಕೈ ಬಿಟ್ಟರೆ ಮಾತ್ರ ಸಮೀಕ್ಷೆಯ ನೈಜವಾದ ಕುಟುಂಬಗಳ ಸಂಖ್ಯೆ ಸಿಗಲಿದೆ. ಕೆಲವು ಕಡೆ ಬೇರೆ ಊರಿನಲ್ಲಿ ಮಾಹಿತಿ ನೀಡಿದವರು ಮತ್ತು ಸಮೀಕ್ಷೆಯನ್ನು ನಿರಾಕರಣೆ ಮಾಡಿರುವ ಈ ಎಲ್ಲ ದತ್ತಾಂಶವನ್ನು ಪರಿಗಣಿಸಿದರೆ ಜಿಲ್ಲೆಯ ಸಮೀಕ್ಷೆಯ ನೈಜ ಚಿತ್ರಣ ಸಿಗಲಿದೆ. ಆದ್ದರಿಂದ, ಗಣತಿ ಸಮೀಕ್ಷೆಯನ್ನು ಮುಂದುವರಿಸಲು ಗಣತಿ ಮನೆಗಳನ್ನು ಹುಡುಕಿಕೊಡಲು ತಮಗೆ ಸ್ಥಳೀಯ ಮಟ್ಟದಲ್ಲಿ ಸಂಬಂಧಿಸಿದ ಸಿಬ್ಬಂದಿಯನ್ನು ನೇಮಿಸಿಕೊಡಬೇಕು ಎಂದು ಮನವಿ ಮಾಡಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಕೃಷ್ಣಮೂರ್ತಿ, ಸಮೀಕ್ಷೆಗೆ ಬಾಕಿ ಇರುವ ಮನೆಗಳ ಸಮೀಕ್ಷೆಗೆ ಅಗತ್ಯ ಸಿಬ್ಬಂದಿ ಒದಗಿಸಲಾಗುವುದು. ಈ ಸಮೀಕ್ಷೆಯನ್ನು ಪೂರ್ಣಗೊಳಿಸಲು ಶಿಕ್ಷಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಶಿಕ್ಷಕರಿಗೆ ಕಾರಣ ಕೇಳಿ ನೀಡಿರುವ ನೋಟಿಸ್‌ಗಳನ್ನು ಹಿಂದಕ್ಕೆ ಪಡೆಯುವುದಾಗಿ ಬಿಇಒ ಎಂ.ಕೃಷ್ಣಪ್ಪ ತಿಳಿಸಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಚ್.ಎನ್.ಮಂಜುನಾಥ್, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಪ್ರಸನ್ನ, ತಾಲೂಕು ಘಟಕದ ಅಧ್ಯಕ್ಷ ಟಿ.ಕೆ.ಬಸವರಾಜ್, ಕಾರ್ಯದರ್ಶಿ ಕವಿತಾ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಜಿ.ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹೇಂದ್ರ, ತಾಲೂಕು ಘಟಕದ ಅಧ್ಯಕ್ಷ ಕೆ.ಆರ್.ರತ್ನಕುಮಾರ್, ಕಾರ್ಯದರ್ಶಿ ಟಿ.ವಿ.ಶೈಲಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net