ಶಿಕ್ಷಕರು ಸಂಸ್ಕಾರಯುತ ಉತ್ತಮ ಶಿಕ್ಷಣ ನೀಡಲಿ

SCHOOL
Published on

ಶಿರಹಟ್ಟಿ: ಶಿಕ್ಷಣ ವ್ಯವಸ್ಥೆ ಇಂದು ಸ್ಪರ್ಧಾತ್ಮಕವಾಗಿ ಬೆಳೆಯುತ್ತಿದ್ದು, ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ. ಜತೆಗೆ ಗ್ರಾಮಸ್ಥರು ಸಹ ಶಾಲೆ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.

ತಾಲೂಕಿನ ರಣತೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನೂತನ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು. ‘ಪ್ರಾಥಮಿಕ ಶಿಕ್ಷಣ ಮಕ್ಕಳ ಉಜ್ವಲ ಭವಿಷ್ಯಕ್ಕೆ ಬುನಾದಿಯಾಗಿದ್ದು, ಈ ಹಂತದಲ್ಲಿ ಶಿಕ್ಷಕರು ಮಕ್ಕಳಿಗೆ ಉತ್ತಮ ಪಾಠ ಬೋಧನೆಯೊಂದಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು. ಅದು ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದ್ದು, ಭವಿಷ್ಯದ ಜೀವನ ಸುಖಮಯವಾಗುತ್ತದೆ. ವಿದ್ಯಾರ್ಥಿಗಳು ಸಹ ಕಲಿಸಿದ ಗುರುವಿನ ಬಗ್ಗೆ ಗೌರವಭಾವನೆ ತಾಳಿ ವಿನಯ, ವಿಧೇಯತೆಯಿಂದ ನಡೆದುಕೊಂಡಾಗ ಗುರುವಿನ ಶ್ರಮ ಸಾರ್ಥಕವಾಗುತ್ತದೆ ಎಂದರು.

ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಗುಣಮಟ್ಟದ ಶಿಕ್ಷಣ ಮತ್ತು ಶಾಲೆಗಳ ಪ್ರಗತಿಗೆ ಎಲ್ಲರ ಸಹಾಯ, ಸಹಕಾರ ಅಗತ್ಯವಿದೆ ಎಂದರು.

ಬಿಇಒ ಎನ್.ಎಚ್. ನಾಯಕ ಮಾತನಾಡಿ, ಶಿಕ್ಷಣ ಪ್ರತಿಯೊಬ್ಬ ವ್ಯಕ್ತಿಗೆ ಮೂಲ ಆಧಾರ. ಅದರಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವುದೇ ಸ್ಥಾನಮಾನ ಪಡೆಯಲು ಸಾಧ್ಯವಿದೆ. ಈ ಸಂಗತಿ ಅರಿತು ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡದೇ ಗುಣಮಟ್ಟದ ಶಿಕ್ಷಣ ಕೊಡಿಸಲು ಆದ್ಯತೆ ನೀಡಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಚವ್ಹಾಣ, ಎಸ್ ಡಿಎಂಸಿ ಅಧ್ಯಕ್ಷ ಚಂದ್ರಶೇಖರ ದಾನಮ್ಮನವರ, ಸಂತೋಷ ಓಬಾಜಿ, ಬಿ.ಡಿ. ಪಲ್ಲೇದ, ಶಂಕರ ಮರಾಠ, ಅಶೋಕ ಬಳ್ಳಾರಿ, ಸುರೇಶ ಸಣ್ಣತಂಗಿ, ವಿಠೋಬ ಬಡಖಂಡಪ್ಪನವರ, ಫಕೀರೇಶ ವಾರದ, ಧರ್ಮಣ್ಣ ಚವ್ಹಾಣ, ಶಿವಯೋಗಪ್ಪ ನಿರ್ವಾಣಶೆಟ್ಟರ, ದೇವಪ್ಪ ಮಾಗಡಿ, ಮಲ್ಲಪ್ಪ ಪ್ಯಾಟಿ, ಶಾಂತಮ್ಮ ತಳವಾರ, ಪಿಡಿಒ ಅನಿತಾ ಮಾಡಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net