ಶಿಕ್ಷಕರು ಆಮಿಷಕ್ಕೆ ಬಲಿಯಾಗದಿರಿ: ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ ಮನವಿ

7
Published on

ಮೈಸೂರು: ಸಮಾಜ ತಿದ್ದುವಂತಹ ಶಕ್ತಿ ಇರುವ ಶಿಕ್ಷಕ ವರ್ಗ ಬೇರೆಯವರು ನೀಡುವ ಆಸೆ ಆಮಿಷಗಳಿಗೆ ಬಲಿಯಾಗದೆ ನಿಮ್ಮ ಸಮಸ್ಯೆ ಪರಿಹರಿಸುವ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿ ಎಂದು ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ ಮನವಿ ಮಾಡಿದರು.
ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಆಡಳಿತ ಮಂಡಳಿ ಮತ್ತು ಶಿಕ್ಷಕರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ ಎಂದರೆ ಅದಕ್ಕೆ ಕಾರಣ ಶಿಕ್ಷಕರು. ಸಮಾಜದಲ್ಲಿ ಶಿಕ್ಷಕರ ಪಾತ್ರವೂ ಮುಖ್ಯ. ಆದರೆ ಶಿಕ್ಷಕರ ಸಮಸ್ಯೆಗಳೇ ಬಹಳಷ್ಟಿದ್ದು, ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲ, 24 ವರ್ಷಗಳ ಕಾಲ ಪರಿಷತ್ ಸದಸ್ಯರಾಗಿ ಕೆಲಸ ಮಾಡಿರುವ ಮರಿತಿಬ್ಬೇಗೌಡರನ್ನು ಗೆಲ್ಲಿಸಿದರೆ ಶಿಕ್ಷಕರ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ಕಾಂಗ್ರೆಸ್ ದೇಶಕ್ಕೆ, ರೈತರಿಗೆ ಬಹಳಷ್ಟು ಕೊಡುಗೆ ನೀಡಿದೆ. ಸಿದ್ದರಾಮಯ್ಯ ಅವರು ಯಾವುದೇ ಧರ್ಮ, ಜಾತಿಗೆ ಸೀಮಿತವಾಗದೆ ಎಲ್ಲ ವರ್ಗದ ಜನರಿಗೂ ಯೋಜನೆಗಳನ್ನು ರೂಪಿಸಿದ್ದಾರೆ. ಹೀಗಾಗಿ ಅವರ ಕೈ ಬಲಪಡಿಸಿ ಎಂದು ಕೋರಿದರು.
ಅಭ್ಯರ್ಥಿ ಮರಿತಿಬ್ಬೇಗೌಡ ಮಾತನಾಡಿ, ನಮ್ಮ ಬದುಕಿನ ಅಳಿವು ಉಳಿವಿನ ಬಗ್ಗೆ ತೀರ್ಮಾನಿಸುವ ಪರ್ವ ಕಾಲದಲ್ಲಿ ನಾವಿದ್ದೇವೆ. ಅಂಬೇಡ್ಕರ್ ಹೇಳಿದಂತೆ ಶಾಲೆಗಳಲ್ಲಿ ಘಂಟೆ ಹೆಚ್ಚು ಬಾರಿಸಿದರೆ ಶಿಕ್ಷಣ ಕ್ರಾಂತಿಯಾಗುತ್ತದೆ. ದೇವಸ್ಥಾನಗಳಲ್ಲಿ ಹೆಚ್ಚು ಘಂಟೆ ಬಾರಿಸಿದರೆ ಮೌಢ್ಯ ಹೆಚ್ಚಾದಂತೆ ಆಗುತ್ತದೆ. ಶೇ.60 ರಷ್ಟು ಕಾರ್ಮಿಕರಿಗೆ ಶಕ್ತಿ ಕೊಟ್ಟಂತಹ ಕೀರ್ತಿ ಅಂಬೇಡ್ಕರ್ ಅವರಿಗಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮಕ್ಕಳಿಗೆ ಶಿಕ್ಷಣದ ಹಕ್ಕು ಸಿಕ್ಕಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವಾ ಭದ್ರತೆ ಕೊರತೆ ಕಾಣುತ್ತಿದೆ. ವಿಶ್ವವಿದ್ಯಾನಿಲಯಗಳಲ್ಲಿ ಬ್ಯಾಕ್‌ಲಾಗ್ ಹುದ್ದೆಗಳು ಬಹಳಷ್ಟು ಖಾಲಿ ಇವೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಬೆಳೆಸುವುದು ಕಷ್ಟದಾಯಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಮಕ್ಕಳಿಗೆ ಶಿಕ್ಷಣ ಕೊಡಲು ಹೇಗೆ ಸಾಧ್ಯ? ಈ ಸಮಸ್ಯೆಗಳನ್ನು ನಾನು ಶಾಸನ ಸಭೆಯಲ್ಲಿ ಚರ್ಚೆಗೆ ತಂದಿದ್ದೇನೆ. ಮುಂದೆಯೂ ತರಲಿದ್ದೇನೆ. ಹೀಗಾಗಿ ಮತ್ತೊಮ್ಮೆ ಮರದಾರರು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಮಾತನಾಡಿ, ಈ ಬಾರಿ ಎಸ್ಸಿ, ಎಸ್ಟಿ ವರ್ಗಕ್ಕೆ ಸೇರುವ ಶಿಕ್ಷಕರು ಖಂಡಿತವಾಗಿಯೂ ನೂರಕ್ಕೆ ನೂರು ಕಾಂಗ್ರೆಸ್‌ಗೆ ಮತ ನೀಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ. 4 ಭಾರಿ ಪರಿಷತ್ ಸದಸ್ಯರಾಗಿರುವ ಮರಿತಿಬ್ಬೇಗೌಡರು ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಪಕ್ಷಕ್ಕೆ ದೊಡ್ಡ ಶಕ್ತಿಯಾಗಿದೆ. ಶಿಕ್ಷಕರು, ಶಿಕ್ಷಣ ಕ್ಷೇತ್ರದ ಬಗ್ಗೆ ಅವರಿಗಿರುವ ಕಾಳಜಿಯೇ ವರದಾನವಾಗಲಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಸುಬ್ಬಯ್ಯ, ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಮುಡಾ ಮಾಜಿ ಸದಸ್ಯ ಶಿವಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಮುಖಂಡರಾದ ಶಶಿಕಲಾ ನಾಗರಾಜು, ಗೋಪಾಲ್, ಸಿದ್ದಪ್ಪ, ನಿವೃತ್ತ ಇಂಜಿನಿಯರ್ ಚನ್ನಮಲ್ಲಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net