

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಕರು ಪ್ರಾಮಾಣಿಕವಾಗಿ ಶಿಕ್ಷಣ ನೀಡಿದಾಗಲೇ ಸಮಾಜದಲ್ಲಿ ಒಳ್ಳೆ ವಾತಾವರಣ ನಿರ್ಮಾಣ ಮಾಡಲು ಸಾಧ್ಯ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ವೇಮನ ವಿದ್ಯಾವರ್ಧಕ ಸಂಘದ ಶಾರದಾ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಶಾರದಾ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಶಿಕ್ಷಣ ವ್ಯಾಪಾರಿಕರಣವಾಗಿದೆ. ಆದರೆ ಸಮಾಜದ ಅನೇಕ ಹಿರಿಯರು ಹಣ ಗಳಿಕೆ ಉದ್ದೇಶವಿಲ್ಲದೆ ದೂರದೃಷ್ಟಿಯಿಂದ ಆರಂಭಿಸಿದ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆಯುವ ಮೂಲಕ ಸಾವಿರಾರು ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ನೀಡಿದೆ. ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಉತ್ತಮ ಸ್ಥಾನ ಅಲಂಕರಿಸಿದ್ದಾರೆ. ಇಂತಹ ಸಂಸ್ಥೆಗಳು ಹೆಚ್ಚಾದಲ್ಲಿ ಎಲ್ಲ ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗಲಿದೆ ಎಂದರು.
ಹಿರಿಯರ ತ್ಯಾಗ, ಕೊಡುಗೆಯಿಂದ ಬೃಹತ್ತಾಗಿ ಬೆಳೆದ ಈ ಸಂಸ್ಥೆಯಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸದಿರುವುದು ನನಗೆ ಖುಷಿಯಾಗಿದೆ. ಮಾತೃ ಭಾಷೆ ಕನ್ನಡದಲ್ಲಿ ಶಿಕ್ಷಣ ಪಡೆದ ಮಕ್ಕಳು ಶಿಕ್ಷಣ ಜತೆಗೆ ಜೀವನದ ಪಾಠವನ್ನೂ ಕಲಿತಿರುತ್ತಾರೆ. ಆದರೆ ಆದರೆ ಆಂಗ್ಲ ಮಾಧ್ಯಮದಲ್ಲಿ ಕಲಿತ ಮಕ್ಕಳು ಆ ರೀತಿ ಬೆಳೆಯಲು ಸಾಧ್ಯವಿಲ್ಲ. ಸಂಸ್ಥೆ ಆರಂಭದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರು ಭದ್ರ ಬುನಾದಿ ಹಾಕುವ ಮೂಲಕ ಉತ್ತಮ ಸ್ಥಾನಕ್ಕೆ ಸಂಸ್ಥೆಯನ್ನು ಬೆಳೆಸಿದ್ದಾರೆ. ಅದೇ ರೀತಿ ಮುಂದಿನ ದಿನಗಳಲ್ಲೂ ಶಿಕ್ಷಣ ನೀಡಲಿ ಎಂದು ಹಾರೈಸಿದರು.
ಸಚಿವ ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಡಳಿತ ಮಂಡಳಿ ಕಾರ್ಯದಿಂದ ಸಂಸ್ಥೆ ಎತ್ತರಕ್ಕೆ ಬೆಳೆದಿದೆ. ಶಿಕ್ಷಕರು ಉತ್ತಮ ಶಿಕ್ಷಣ ನೀಡುವ ಮೂಲಕ ಗುಣಮಟ್ಟದ ಫಲಿತಾಂಶ ನೀಡಿದ್ದಾರೆ. ಹೀಗಾಗಿ ಸಂಸ್ಥೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಕಾಣುತ್ತಿದೆ ಎಂದರು.
ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ, ನ್ಯಾಯಮೂರ್ತಿ ರವಿ ಹೊಸಮನಿ ಮಾತನಾಡಿದರು. ಕೆ.ಎಲ್. ಪಾಟೀಲ ಸೇರಿ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಸಾಧಕರಿಗೆ ಸನ್ಮಾನಿಸಲಾಯಿತು. ವೇಮನ ವಿದ್ಯಾವರ್ಧಕ ಸಂದ ಉಪಾಧ್ಯಕ್ಷ ಆರ್.ಟಿ. ಜಂಗಲ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಹುಡಾ ಅಧ್ಯಕ್ಷ ಶಾಕೀರ ಸನದಿ, ಸಂಸ್ಥೆ ಪದಾಧಿಕಾರಿಗಳಾದ ಆರ್.ಕೆ. ಪಾಟೀಲ, ಆರ್.ವಿ. ಪಾಟೀಲ, ವಿ.ಆರ್. ಹನಮರಡ್ಡಿ, ಕೆ.ವಿ. ತಿಮ್ಮಾಪುರ, ಎಸ್.ಬಿ. ಮುದಿಗೌಡರ, ಡಾ. ಆನಂದ ಪಾಂಡುರಂಗಿ, ಇತರರು ಇದ್ದರು.