

ನರಗುಂದ: ಶಿಕ್ಷಕರು ಮಕ್ಕಳ ಶೈಕ್ಷಣಿಕ ಜೀವನಕ್ಕೆ ಭದ್ರತೆ ಒದಗಿಸುವ ಮೂಲಕ ಅವರ ಜೀವನದ ಭವಿಷ್ಯ ಬರೆಯುವ ಮಹಾನ್ ಸಾಧಕರಾಗಿದ್ದಾರೆ. ಶಿಕ್ಷಕರ ಸೇವೆ ಸದಾಕಾಲ ಸ್ಮರಿಸುವುದು ನಮ್ಮೆಲ್ಲರ ಆದ್ಯತೆ ಆಗಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಪ್ರಯುಕ್ತ ಪಟ್ಟಣದ ಆರೂಢಜ್ಯೋತಿ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ, ತಾಲೂಕು ಮಟ್ಟದ ವಿವಿಧ ಕ್ರೀಡಾ ಕೂಟಗಳ ಉದ್ಘಾಟನೆ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ರಾಜಕಾರಣಿಗಳು ಸಾಮಾಜಿಕ ಕಳಕಳಿ ಹೊಂದಿರಬೇಕು. ಶಿಕ್ಷಕರು ನೈತಿಕ, ಮೌಲ್ಯಾಧಾರಿತ ಶಿಕ್ಷಣ ನೀಡುವುದರ ಜತೆಗೆ ಮಾನವೀಯತೆಯೊಂದಿಗೆ ವೃತ್ತಿಯಲ್ಲಿ ಸಚ್ಚಾರಿತ್ರ್ಯವಂತರಾಗಿ ಮಕ್ಕಳನ್ನು ಯಶಸ್ಸಿನ ದಡ ಸೇರಿಸಲು ಮುಂದಾಗಬೇಕು ಎಂದರು.
ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ಶಿಕ್ಷಕರು ನಾಡಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸೈನಿಕರು ನಾಡನ್ನು ರಕ್ಷಿಸುವ ಮಹತ್ತರವಾದ ಜವಾಬ್ದಾರಿ ಹೊಂದಿರುತ್ತಾರೆ. ಇವರಿಗೆ ನಾವು ಸದಾ ಋಣಿಯಾಗಿರಬೇಕು ಎಂದರು.
ಪ್ರಭಾರಿ ಬಿಇಒ ಬಿ.ಎಫ್. ಮಜ್ಜಗಿ ಮಾತನಾಡಿ, ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರು 11 ಬಾರಿ ನೋಬೆಲ್ ಪ್ರಶಸ್ತಿ ಪಡೆದು ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ಅವರ ಶೈಕ್ಷಣಿಕ ಚಿಂತನೆ ಇಡೀ ರಾಷ್ಟ್ರಕ್ಕೆ ಮಾದರಿ. ಇಲ್ಲಿನ ವೇದ-ಹಿಂದು ಸಂಸ್ಕೃತಿ ಬಗ್ಗೆ ತಿಳಿಸಿಕೊಟ್ಟಿರುವ ಮಹಾನ್ ಮೇಧಾವಿ. ಮಹಿಳಾ ಶಿಕ್ಷಕಿಯರಿಗೆ ಸಾವಿತ್ರಿಭಾಯಿ ಪುಲೆ ಸ್ಫೂರ್ತಿಯ ಸೆಲೆಯಾಗಿ ಹೊರಹೊಮ್ಮಿದ್ದಾರೆ. ಶಿಕ್ಷಕರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಬದಿಗಿಟ್ಟು ಹೊಸತನದ ಸಂಕಲ್ಪ, ಭರವಸೆಯೊಂದಿಗೆ ಸೇವೆಗೆ ಮುಂದಾದರೆ ಬದಲಾವಣೆ ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ಆರ್ಶೀವಚನ ನೀಡಿದರು. ಕಾರ್ಯಕ್ರಮದ ಪ್ರಯುಕ್ತ ರಕ್ತದಾನ ಶಿಬಿರ, ಶಿರೋಳದ ಹಂಪಸಾಗರ ಪರ್ವತದೇವರ ಯೋಗ ಮತ್ತು ವ್ಯಾಯಾಮ ಶಾಲೆ ವಿದ್ಯಾರ್ಥಿಗಳಿಂದ ಯೋಗಾಸನ ಕಾರ್ಯಕ್ರಮ ಜರುಗಿತು. ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಅತ್ಯುತ್ತಮ ಉಪನ್ಯಾಸಕ, ರಾಜ್ಯಮಟ್ಟದ ಕ್ರೀಡೆಯಲ್ಲಿ ಸಾಧನೆಗೈದ ಶಿಕ್ಷಕರು, ನಿವೃತ್ತ ಶಿಕ್ಷಕರು ಹಾಗೂ ನರಗುಂದ ತಾಲೂಕು ಮಟ್ಟದ ಅತ್ಯುತ್ತಮ ಶಾಲೆ ಪ್ರಶಸ್ತಿಗೆ ಭಾಜನರಾಗಿರುವ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರನ್ನು ಸನ್ಮಾನಿಸಲಾಯಿತು. ಗದಗ ತಾಲೂಕು ಹಿರೇಕೊಪ್ಪದ ಹುತಾತ್ಮ ಯೋಧ ಮಂಜುನಾಥ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ತಾಪಂ ಇಒ ಎಸ್.ಕೆ. ಇನಾಮದಾರ, ಪುರಸಭೆ ಅಧ್ಯಕ್ಷೆ ನೀಲಮ್ಮ ವಡ್ಡಿಗೇರಿ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಅಪ್ಪಣಗೌಡ ನಾಯ್ಕರ, ರಾಚನಗೌಡ ಪಾಟೀಲ, ಅನ್ನಪೂರ್ಣ ಯಲಿಗಾರ, ಕಾಶಮ್ಮ ಮಳಗಿ, ಎನ್.ಆರ್. ನಿಡಗುಂದಿ, ಎಸ್.ವಿ. ಕ್ಯಾಮನಗೌಡ್ರ, ಪ್ರಕಾಶ ಹಾದಿಮನಿ, ಎಂ.ಎಸ್. ಅಸುಂಡಿ, ಡಿ.ಆರ್. ಗದ್ದನಕೇರಿ, ಝ.ಎಂ.ಖಾಜಿ, ಪಿ.ಸಿ. ಕಲಹಾಳ, ಎಸ್.ಎಲ್. ಮರಿಗೌಡ್ರ, ಮಹೇಶ ಹಿರೇಮಠ ಇತರರಿದ್ದರು. ಅರವಿಂದ ಮೇಗೂರ, ಅನ್ನಪೂರ್ಣ ತೇಲಿ, ಪ್ರಮೋದ ಜಾಧವ, ರವಿ ಹುಬ್ಬಳ್ಳಿ ನಿರ್ವಹಿಸಿದರು.