

ಬಸವನಬಾಗೇವಾಡಿ : ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಕಳಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದು ಬೆಂಗಳೂರಿನ ಸಹಕಾರಿ ಮಹಾಮಂಡಳಿಯ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ಶುಕ್ರವಾರ ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಹೆಣ್ಣುಮಕ್ಕಳ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಪಂ ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಖಂಡ ಬಸವನಬಾಗೇವಾಡಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರಿ ಶಾಲಾ ಮಕ್ಕಳಲ್ಲಿ ಅನೇಕ ಪ್ರತಿಭಾವಂತ ಮತ್ತು ಅವರಲ್ಲಿ ಅಡಗಿರುವ ಅನೇಕ ಪ್ರತಿಭೆಯನ್ನು ಶಾಲಾ ಶಿಕ್ಷಕರು ಗುರುತಿಸಿ ಅಂತಹ ವಿದ್ಯಾರ್ಥಿಗಳನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಉತ್ತಮ ಪ್ರೋತ್ಸಾಹ ನೀಡಿದರೆ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಶಾಲೆಗೆ ಕೀರ್ತಿ ತರುವುದು ನಿಶ್ಚಿತ ಎಂದರು.
ಹಿರಿಯ ನ್ಯಾಯವಾದಿ ಬಿ.ಕೆ. ಕಲ್ಲೂರ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆಗೆ ನಮ್ಮ ನಾಡು, ನುಡಿ ದೇಶದ ಸಂಸ್ಕೃತಿ, ಸಂಸ್ಕಾರ ನೀಡಬೇಕು. ಪ್ರತಿಯೊಬ್ಬ ಮಕ್ಕಳಲ್ಲಿ ಅಗೋಚರ ಶಕ್ತಿ ಅಡಗಿರುತ್ತದೆ.
ಅಂತಹ ಅಗೋಚರ ಶಕ್ತಿಯನ್ನು ಪ್ರಪಂಚದ ಮುಂದೆ ತರುವ ಕಾರ್ಯ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ ಎಂದರು.
ಬಿಇಒ ವಸಂತ ರಾಠೋಡ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಜೆಡಿಎಸ್ ಮುಖಂಡ ಶಿವನಗೌಡ ಬಿರಾದಾರ, ಎಂ.ಬಿ. ತೋಟದ, ಶಿವಾನಂದ ಮಂಗಾನವರ, ಎಸ್.ಎಸ್. ಅವಜಿ, ಸಿದ್ದು ಉಕ್ಕಲಿ, ಬಸವರಾಜ ಪೂಜಾರಿ, ಸಿ.ಟಿ. ಮಾದರ, ಆರ್.ಬಿ. ಗೌಡರ, ಎಸ್.ಬಿ. ಒನರೊಟ್ಟಿ, ಪಿ.ವೈ. ರತ್ನಾಕರ, ಎಸ್.ಎಸ್. ದಳವಾಯಿ ಇತರರಿದ್ದರು.
ಶಿಕ್ಷಕ ಬಿ.ಎಸ್. ಅವಟಿ ಪ್ರಾಸ್ತಾವಿಕ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಪಿ.ಯು. ರಾಠೋಡ ಸ್ವಾಗತಿಸಿದರು. ಶಿಕ್ಷಕಿ ಭಾರತಿ ಪಾಟೀಲ ನಿರೂಪಿಸಿದರು. ಶಿಕ್ಷಕ ಎಂ.ವಿ. ಗಬ್ಬೂರ ವಂದಿಸಿದರು.