

ರಾಯಚೂರು ಬೇಸಿಗೆ ರಜೆ ಮುಗಿದು ಶಾಲೆಗಳಿಗೆ ಚಿಣ್ಣರು ಆಗಮಿಸಲು ಕ್ಷಣಗಣನೆ ಆರಂಭವಾಗಿದ್ದು, ಗುರುವಾರ ಪ್ರತಿ ವರ್ಷದಂತೆ ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಾಲೆಯ ಕೊಠಡಿ ಹಾಗೂ ಆವರಣವನ್ನು ಶಾಲಾ ಶಿಕ್ಷಕರು ಸ್ವಚ್ಚತೆ ಮಾಡಿಸಿ ಪಠ್ಯಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಸಿದ್ದತೆ ನಡೆಸಿದರು.
ಪ್ರತಿ ವರ್ಷದಂತೆ ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳನ್ನು ವಿನೂತನವಾಗಿ ಸ್ವಾಗತಿಸುವ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ಶಾಲೆಗಳು, ಶಿಕ್ಷಕರು ಸಿದ್ಧಗೊಂಡಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ಸೂಚನೆಯಂತೆ ಗುರುವಾರ ಪ್ರಾರಂಭವಾಗಿರುವುದರಿಂದ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯಗಳು ಭರದಿಂದ ಸಾಗಿದವು. ಸಿಬ್ಬಂದಿ ಜತೆ ಕೈ ಜೋಡಿಸಿದ ಶಿಕ್ಷಕರು ಶಾಲಾ ಆವರಣ, ತರಗತಿ ಕೋಣೆ, ಅಡುಗೆ ಕೋಣೆ, ಶೌಚಾಲಯ ಹಾಗೂ ನೀರಿನ ಸಿಂಟೆಕ್ಸ್ , ಅಡುಗೆ ಪರಿಕರ ಸ್ವಚ್ಛತೆ ಹಾಗೂ ಶಾಲೆಗಳ ಮೇಲ್ಬಾವಣೆ ಮೇಲಿರುವ ಕಸ ತೆಗೆದು ಸ್ವಚ್ಛತೆ ಕಾರ್ಯ ನಡೆಸಿದರು.
ಜಿಲ್ಲೆಯ ವಿವಿಧೆಡೆಯ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಶಾಲಾ ಪ್ರಾರಂಭಕ್ಕೆ ಸಕಲ ಸಿದ್ಧತೆಗಳು ನಡೆದವು. ಗ್ರಾಮೀಣ ಭಾಗದಲ್ಲಿ ಮಕ್ಕಳ ಜತೆ ಗ್ರಾಮಗಳ ಓಣಿ ಓಣಿಗಳಲ್ಲಿ ಸಂಚರಿಸಿದ ಶಿಕ್ಷಕರು ಶಾಲಾ ಪ್ರಾರಂಭ ಹಾಗೂ ವಿಶೇಷ ದಾಖಲಾತಿ ಆಂದೋಲನ ನಡೆಸಿದರು. ಈಗಾಗಲೇ ಬಹುತೇಕ ಶೈಕ್ಷಣಿಕ ವಲಯಗಳಲ್ಲಿ ಮಕ್ಕಳ ಪಠ್ಯಪುಸ್ತಕ, ಸಮವಸ ವಿತರಣೆ ಮಾಡಲಾಗಿದೆ. ಜತೆಗೆ ಪರಿಹಾರ ಬೋಧನಾ ತರಗತಿಗಳನ್ನು ಆರಂಭಿಸಲು ಶಿಕ್ಷಕರು ಸಕಲ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಎಷ್ಟು ಶಾಲೆಗಳು
ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಡ ಶಾಲೆಗಳು ಸೇರಿ ಒಟ್ಟು 3552 ಶಾಲೆಗಳಿದ್ದು, ಇದರಲ್ಲಿ ಕಿರಿಯ ಶಾಲೆಗಳು 839 ಶಾಲೆಗಳು, ಹಿರಿಯ ಹಾಗೂ ಪ್ರೌಢಶಾಲೆಗಳು 2713 ಶಾಲೆಗಳು ಇವೆ. ಆದರೆ ಕಳೆದ ವಾರದಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಜಿಲ್ಲೆಯಲ್ಲಿ ಅನೇಕ ಶಾಲೆಗಳು ಶಿಥಿಲಾವಸ್ಥೆಯಲ್ಲಿದ್ದು, ಮಳೆಗಾಲ ಶುರುವಾಗಿದ್ದರಿಂದ ಅನೇಕ ಕೊಠಡಿಗಳು ಸೋರುತ್ತಿವೆ, ಮಕ್ಕಳು ಹಾಗೂ ಶಿಕ್ಷಕರು ಆತಂಕದಲ್ಲಿಯೇ ಬೋಧನೆ ಮಾಡುವಂತಾಗಿದೆ.
ಶೈಕ್ಷಣಿಕವಾಗಿ ಹಿಂದುಳಿದ ರಾಯಚೂರು ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯೂ ದೊಡ್ಡ ತಲೆನೋವಾಗಿದೆ. ಜಿಲ್ಲೆಯ 7 ತಾಲೂಕುಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಡ ಶಾಲೆಗಳು ಸೇರಿ ಒಟ್ಟು 14,068 ಶಾಲಾ ಕೊಠಡಿಗಳಿದ್ದು ಈ ಪೈಕಿ 1,147 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಈ ಪೈಕಿ ದೇವದುರ್ಗ ತಾಲೂಕಿನಲ್ಲಿ 209 ಶಾಲಾ ಕೊಠಡಿಗಳು ಶಿಥಿಗೊಂಡಿವೆ, ಲಿಂಗಸೂಗೂರಿನಲ್ಲಿ 184, ಮಾನ್ವಿ 125, ರಾಯಚೂರು ಗ್ರಾಮೀಣ 152, ರಾಯಚೂರು ನಗರ 75, ಸಿಂಧನೂರಿನಲ್ಲಿ 204 ಶಾಲಾ ಕೊಠಡಿಗಳು ಶಿಥಿಲಗೊಂಡಿವೆ.
ಶಿಕ್ಷಕರ ಹುದ್ದೆ ಖಾಲಿ
ಈ ಬಾರಿಯ ಎಸ್‌ಎಸ್‌ಎಲ್ಸಿ ಫಲಿತಾಂಶದಲ್ಲಿ ರಾಯಚೂರು ಜಿಲ್ಲೆ 32ನೇ ಸ್ಥಾನ ಪಡೆದಿತ್ತು. ಇದಕ್ಕೆ ಕಾರಣ ಶಿಕ್ಷಕರ ಕೊರತೆ ಹಾಗೂ ಶಾಲೆಗಳ ಕೊಠಡಿಗಳ ಅವ್ಯವಸ್ಥೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 4,343 ಹಾಗೂ ಪ್ರೌಢಶಾಲೆಗಳಲ್ಲಿ 1,040 ಸೇರಿ ಒಟ್ಟು 5,401 ಶಿಕ್ಷಕರ ಹುದ್ದೆ ಖಾಲಿ ಇದೆ. ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡದೇ ರಾಜ್ಯ ಸರ್ಕಾರ ಕೇವಲ ಅತಿಥಿ ಶಿಕ್ಷಕರನ್ನೇ ನೇಮಕ ಮಾಡಿಕೊಂಡು ತೃಪ್ತಿ ಪಡಿಸುವ ಕೆಲಸ ಮಾಡುತ್ತಿದೆ.
ಇಂದಿನಿಂದ ಶಾಲೆಗಳು ಪ್ರಾರಂಭವಾಗಿದ್ದು, ಈಗಾಗಲೇ ಶಾಲಾ ಆಡಳಿತ ಮಂಡಳಿಯಿಂದ ಸ್ವಚ್ಛತೆ ಕಾರ್ಯ ಮಾಡಲಾಗಿದ್ದು, ಶೇ 70 ರಷ್ಟು ಪಠ್ಯಪುಸ್ತಕ ಬಂದಿವೆ. ಕೆಲ ಶಾಲೆಯಲ್ಲಿ ಶಿಕ್ಷಕರ ಸಮಸ್ಯೆ ಸರಿದೂಗಿಸಲು ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುವುದು.
ಡಾ.ಕೆ.ಡಿ ಬಡಿಗೇರ ಡಿಡಿಪಿಐ ರಾಯಚೂರು