ವಿವಿಧ ಬೇಡಿಕೆ ಈಡೇರಿಕೆಗೆ ಪಟ್ಟು ; ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿಶೇಷ ಶಿಕ್ಷಕರು, ಶಿಕ್ಷಕೇತರರ ಸಂಘದಿಂದ ಪ್ರತಿಭಟನೆ

DSC_2909
Published on

ತುಮಕೂರು: ಶಿಶು ಕೇಂದ್ರೀಕೃತ ಶಿಕ್ಷಣ ಸಹಾಯಧನ ಯೋಜನೆ ಅಡಿ ನೀಡಲಾಗುತ್ತಿರುವ ಅನುದಾನ ದ್ವಿಗುಣಗೊಳಿಸಬೇಕು. ಅನುದಾನಿತ ಸಾಮಾನ್ಯ ಶಾಲಾ ಶಿಕ್ಷಕರು ಹಾಗೂ ಶಿಕ್ಷಕೇತರರಿಗೆ ನೀಡುತ್ತಿರುವ ಗೌರವಧನವ ಹೆಚ್ಚಳ ಮತ್ತಿತರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘ ಮತ್ತು ಅಂಗವಿಕಲರ ಸ್ವಯಂ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಸಾಮಾನ್ಯ ಶಿಕ್ಷಕರಿಗೆ ಸಿಗುವ ಗೌರವ, ಮಾನ್ಯತೆ ಹಾಗೂ ಸೌಲಭ್ಯಗಳು ನಮಗೂ ದೊರೆಯಬೇಕು ಎಂದು ತುಮಕೂರು ಜಿಲ್ಲಾ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂದ ಕಾರ್ಯದರ್ಶಿ ಪ್ರಮೀಳಾ ಕುಮಾರಿ ಆಗ್ರಹಿಸಿದರು. ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ವಿಶೇಷ ಶಿಕ್ಷಣ ಸಂಸ್ಥೆಗಳು ಅನುದಾನ ಪಡೆಯುತ್ತಿವೆ. ಈ ಸಂಸ್ಥೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ವೇತನ ಕೂಡ ನಿಗದಿತ ಸಮಯದಲ್ಲಿ ದೊರೆಯದೆ ಇರುವುದರಿಂದ ಜೀವನ ಸಾಗಿಸಲು ಕಷ್ಟವಾಗಿದೆ ಎಂದರು.

ನಿಗದಿತ ವೇಳೆಯಲ್ಲಿ ಗೌರವಧನ ನೀಡಬೇಕು, ಪ್ರತಿಭಟನೆಗೆ ಸರ್ಕಾರ ಸೂಕ್ತ ರೀತಿ ಸ್ಪಂದಿಸದಿದ್ದರೆ ರಾಜ್ಯದ ಎಲ್ಲ ವಿಶೇಷ ಶಾಲೆಗಳ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಬೆಂಗಳೂರಿಗೆ ಆಗಮಿಸಿ, ವಿಧಾನಸೌಧ ರಸ್ತೆಯ ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡದ ಪೋಡಿಯಂ ಬ್ಲಾಕಿನಲ್ಲಿರುವ ನಿರ್ದೇಶಕರ ಕಚೇರಿಯ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅನುದಾನಿತ ಸಾಮಾನ್ಯ ಶಾಲಾ ಶಿಕ್ಷಕರು ಹಾಗೂ ಶಿಕ್ಷಕೇತರರಿಗೆ ನೀಡುತ್ತಿರುವ ಗೌರವಧನ ದ್ವಿಗುಣಗೊಳಿಸಬೇಕು, ಶಿಶು ಕೇಂದ್ರೀಕೃತ ಶಿಕ್ಷಣ ಸಹಾಯಧನ ಯೋಜನೆ ಅಡಿ ನೀಡಲಾಗುತ್ತಿರುವ ಅನುದಾನವನ್ನು ಸಹ ದ್ವಿಗುಣಗೊಳಿಸುವ ಜತೆಗೆ ಸಾಮಾನ್ಯ ಶಿಕ್ಷಕರಿಗೆ ಸಿಗುವಂತಹ ಗೌರವ, ಮಾನ್ಯತೆ ಹಾಗೂ ಸೌಲಭ್ಯಗಳು ನಮಗೂ ದೊರೆಯಬೇಕು ಎಂದು ಪ್ರಮೀಳಾ ಕುಮಾರಿ ಆಗ್ರಹಿಸಿದರು.

ವಿಶೇಷ ಶಿಕ್ಷಕರಾದ ರಾಧಾ, ನಳಿನಾಕುಮಾರಿ, ನಂದನಾ, ಪಾರ್ವತಮ್ಮ ಮತ್ತಿತರರು ಪ್ರತಿಭಟನೆ ನೇತೃತ್ವವಹಿಸಿದ್ದರು.

ಸಾಕಷ್ಟು ಸಮಸ್ಯೆಗಳ ನಡುವೆ ಕೆಲಸ ಮಾಡುತ್ತಿರುವ ವಿಶೇಷ ಶಿಕ್ಷಕರ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಸಾಕಷ್ಟು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ, ಕರೊನಾ ಸಂಕಷ್ಟದಲ್ಲಿ ಬದುಕು ಕಷ್ಟವಾಗಿದ್ದು ಕೂಡಲೇ ಸರ್ಕಾರ ನೆರವಿಗೆ ಬರಬೇಕು.

ಪ್ರಮೀಳಾಕುಮಾರಿ, ಕಾರ್ಯದರ್ಶಿ, ವಿಶೇಷ ಶಿಕ್ಷಕರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net