

ಹರೀಶ್ ಮೋಟುಕಾನ ಮಂಗಳೂರು
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಒಟ್ಟು 1890 ಶಿಕ್ಷಕ ಹುದ್ದೆಗಳು ಖಾಲಿ ಇವೆ.
ಕರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಶಾಲಾ-ಕಾಲೇಜುಗಳು ಸುದೀರ್ಘ ಒಂದೂವರೆ ವರ್ಷದ ಬಳಿಕ ಆರಂಭಗೊಂಡಿವೆ. ಪ್ರಾಥಮಿಕ ಶಾಲೆಗಳ ಆರಂಭವೂ ಆಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯೂ ಹೆಚ್ಚಳ ಕಂಡಿದೆ. ಆದರೆ ಶಿಕ್ಷಕರದ್ದೇ ಕೊರತೆ. ಪರಿಣಾಮ, ಮುಂದಿನ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಹೊಡೆತ ನೀಡುವ ಲಕ್ಷಣ ಗೋಚರಿಸಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು, ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ ಇದೆ. ಇದರಿಂದಾಗಿ ಇರುವ ಶಿಕ್ಷಕರಿಗೆ ಹೊರೆ ಹೆಚ್ಚಾಗಿದೆ. ಭೌತಿಕ ತರಗತಿಗಳು ಆರಂಭವಾಗಿರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಅತಿಥಿ ಶಿಕ್ಷಕರ, ಉಪನ್ಯಾಸಕರ ನೇಮಕ ಮಾಡುವ ಭರವಸೆ ನೀಡಿದೆ. ಆದರೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ.
ಅನುದಾನಿತ ಶಾಲಾ ಕಾಲೇಜುಗಳಲ್ಲಿಯೂ ಇದೇ ಸ್ಥಿತಿ ಇದೆ. ಅವುಗಳ ಆಡಳಿತ ಮಂಡಳಿಗಳು ಹುದ್ದೆ ಭರ್ತಿಗೆ ಸರ್ಕಾರದ ಅನುಮತಿ ನಿರೀಕ್ಷೆಯಲ್ಲಿವೆ. ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಆಡಳಿತ ಮಂಡಳಿಗಳೇ ಶಿಕ್ಷಕರ ನೇಮಕ ಮಾಡುವ ಕಾರಣ ಅಲ್ಲಿ ಇಂತಹ ಸಮಸ್ಯೆ ಇಲ್ಲ.
ಉಪನ್ಯಾಸಕರ ಕೊರತೆ: ದ.ಕ. ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ 150 ಉಪನ್ಯಾಸಕ ಹುದ್ದೆ ಖಾಲಿಯಿದ್ದರೆ, ಉಡುಪಿಯಲ್ಲಿ 106 ಹುದ್ದೆ ಖಾಲಿ. ಕೆಲಸದ ಒತ್ತಡ ಕಡಿಮೆ ಇರುವ ಕಾಲೇಜಿನಿಂದ ಹೆಚ್ಚುವರಿ ಉಪನ್ಯಾಸಕರನ್ನು ಅಗತ್ಯವಿರುವ ಕಾಲೇಜಿಗೆ ನಿಯೋಜಿಸುವ ಕಾರ್ಯ ಸದ್ಯ ನಡೆಸಲಾಗುತ್ತಿದೆ.
ಪದವಿ ‘ಅತಿಥಿ’ಗಳ ಸಂಕಷ್ಟ: ಮಂಗಳೂರು ವಿವಿ ವ್ಯಾಪ್ತಿಗೆ ಒಳಪಟ್ಟ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಶೇ.60ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಬಹುತೇಕ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನೇ ನಿಯೋಜಿಸುವ ಪದ್ಧತಿ ಇಲ್ಲಿ ಬೆಳೆದು ಬಂದಿದೆ. ಆದರೆ 2021-22ರ ಶೈಕ್ಷಣಿಕ ಅವಧಿಗೆ ಹೊಸ ನೇಮಕವಾಗಿಲ್ಲ. ಮಂಗಳೂರು ವಿವಿಯ 2020-21ರ ಶೈಕ್ಷಣಿಕ ಅವಧಿ ಸೆ.22ಕ್ಕೆ ಕೊನೆಗೊಂಡ ಕಾರಣ ಇಲ್ಲಿಯ ತನಕ ಕಾರ್ಯನಿರ್ವಹಿಸಿದ್ದ 900ರಷ್ಟು ಅತಿಥಿ ಉಪನ್ಯಾಸಕರು ಮುಂದೇನು ಎನ್ನುವ ಚಿಂತೆಯಲ್ಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ: ಶಾಲೆ ಹುದ್ದೆ ಭರ್ತಿ ಖಾಲಿ
ಪ್ರಾಥಮಿಕ 3729 2701 1028
ಪ್ರೌಢ 1172 959 213
ಉಡುಪಿ ಜಿಲ್ಲೆ: ಶಾಲೆ ಹುದ್ದೆ ಭರ್ತಿ ಖಾಲಿ
ಪ್ರಾಥಮಿಕ 2174 1646 528
ಪ್ರೌಢ 851 731 121
ಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರ ನೇಮಕಾತಿಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈಗಾಗಲೇ ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿಗೆ ಅನುಮತಿ ನೀಡಿದ್ದಾರೆ. ನೇಮಕಾತಿ ಪ್ರಕ್ರಿಯೆ ಅನುಷ್ಠಾನದಲ್ಲಿದೆ.
- ಮಲ್ಲೇಸ್ವಾಮಿ, ಉಪನಿರ್ದೇಶಕ, ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ
ಉಪನ್ಯಾಸಕರ ಹುದ್ದೆ ಭರ್ತಿ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ತಕ್ಷಣ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಶೈಕ್ಷಣಿಕ ಚಟುವಟಿಕೆ ನಡೆಸಲು ಉಪನ್ಯಾಸಕರ ನಿಯೋಜನೆ ನಡೆಸಲಾಗುತ್ತದೆ. ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರ್ಕಾರದ ಅನುಮತಿಯ ನಿರೀಕ್ಷೆಯಲ್ಲಿದ್ದೇವೆ.
- ಜಯಣ್ಣ/ಮಾರುತಿ, ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕರು, ದಕ್ಷಿಣ ಕನ್ನಡ, ಉಡುಪಿ