

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸರ್ಕಾರಿ ಶಾಲೆಗಳಲ್ಲಿ ಎಲ್ಲ ಸೌಕರ್ಯವಿದೆ, ಹಾಲು, ಮೊಟ್ಟೆ, ಮಧ್ಯಾಹ್ನದ ಬಿಸಿಯೂಟ, ಸಮವಸ, ಪುಸ್ತಕ, ಉತ್ತಮ ಕಟ್ಟಡ ಹೀಗೆ ಎಲ್ಲವೂ ಇದೆ ಆದರೆ ಶಿಕ್ಷಣ ನೀಡಬೇಕಾದ ಶಿಕ್ಷಕರೇ ಇಲ್ಲ...!
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಕಳೆದ ನಾಲ್ಕೈದು ವರ್ಷದಿಂದ ಶಿಕ್ಷಕರ ಕೊರತೆ ಎದುರಿಸುತ್ತಿದ್ದು, ಮಕ್ಕಳಿಗೆ ಆಯಾ ವಿಷಯಗಳ ಬೋಧನೆಗೆ ಸಂಕಷ್ಟ ಎದುರಾಗಿದೆ. ಸರ್ಕಾರ ಅತಿಥಿ ಶಿಕ್ಷಕರ ನೇಮಕಕ್ಕೆ ಮುಂದಾಗಿದ್ದರೂ ಅತಿಥಿ ಶಿಕ್ಷಕರೂ ಸಿಗುತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಅತಿಥಿ ಶಿಕ್ಷಕರ ನೇಮಕ ಜವಾಬ್ದಾರಿ ಹೊತ್ತಿರುವ ಆಯಾ ಶಾಲಾ ಮುಖ್ಯಶಿಕ್ಷಕರು ಪರದಾಡುತ್ತಿದ್ದಾರೆ. ಪ್ರತಿ ನಿತ್ಯ ಶಿಕ್ಷಕರು ಎಲ್ಲಿದ್ದಾರೆ, ನಮ್ಮ ಶಾಲೆಗೆ ಬರುತ್ತಾರೆಯೇ ಎಂದು ವಿಚಾರಿಸುವುದರಲ್ಲೇ ಸುಸ್ತಾಗಿ ಹೋಗುವಂತಾಗಿದೆ.
ಕಡಿಮೆ ಸಂಬಳ ಕಾರಣ: ಸರ್ಕಾರ ಅತಿಥಿ ಶಿಕ್ಷಕರಿಗೆ ಗೌರವಧನವಾಗಿ 12,500 ರೂಪಾಯಿ ನಿಗಧಿಪಡಿಸಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸಲು ಸರ್ಕಾರ ನಿಗಧಿಪಡಿಸಿರುವ ಗೌರವಧನ ಬಹಳ ಕಡಿಮೆ ಎನ್ನುವುದು ಶಿಕ್ಷಕರ ಅಳಲಾಗಿದೆ. ಖಾಸಗಿ ಶಾಲೆಗಳಲ್ಲೇ 20 ರಿಂದ 25 ಸಾವಿರ ರೂಪಾಯಿ ಕೊಡುತ್ತಾರೆ ಎಂಬ ಮಾತು ಕೇಳಿಬರುತ್ತಿದ್ದು ಸರ್ಕಾರಿ ಶಾಲೆಗಳತ್ತ ಶಿಕ್ಷಕರು ಬರಲು ಹಿಂದೇಟು ಹಾಕುತ್ತಿದ್ದಾರೆ.
ಖಾತ್ರಿಯೂ ಇಲ್ಲ, ಸಂಬಳವೂ ಸರಿಯಾಗಿ ಬರಲ್ಲ: ಇನ್ನು ಅತಿಥಿ ಶಿಕ್ಷಕರನ್ನಾಗಿ ನೇಮಿಸಿಕೊಂಡರೆ ಅವರ ಉದ್ಯೋಗಕ್ಕೆ ಖಾತ್ರಿ ಇಲ್ಲದಂತಾಗಿದೆ. ಬೇರೆ ಶಾಲೆಗಳಿಂದ ಶಿಕ್ಷಕರು ಅಲ್ಲಿನ ಶಾಲೆಗೆ ನಿಯೋಜನೆಯಾದರೆ ಅತಿಥಿ ಶಿಕ್ಷಕರು ಜಾಗ ಖಾಲಿ ಮಾಡಬೇಕಾಗುತ್ತದೆ. ಇದರಿಂದ ಉದ್ಯೋಗ ಭದ್ರತೆ ಇಲ್ಲದೆ ಹೇಗೆ ತಾನೆ ಕೆಲಸ ಮಾಡುವುದು ಎಂಬುದು ಶಿಕ್ಷಕರ ಅಹವಾಲಾಗಿದೆ. ಇದರೊಂದಿಗೆ ಸರ್ಕಾರ ನಿಗಧಿಪಡಿಸಿರುವ ಗೌರವಧನ ತಿಂಗಳಿಗೆ ಸರಿಯಾಗಿ ಬರುವುದಿಲ್ಲ. ಕೆಲವು ವೇಳೆ ನಾಲ್ಕೈದು ತಿಂಗಳು ಕಾಯಬೇಕಾದ ಪರಿಸ್ಥಿತಿ ಇದೆ. ಇದರಿಂದ ಅಷ್ಟೂ ತಿಂಗಳು ಜೀವನ ಬಂಡಿ ದೂಡುವುದು ಹೇಗೆ ಎಂಬುದು ಶಿಕ್ಷಕರ ಪ್ರಶ್ನೆಯಾಗಿದೆ.
ಟ್ರೈನಿಂಗ್ ಕೊಡಬೇಕು: ಈಗಾಗಲೇ ಅನುಭವ ಹೊಂದಿರುವ ಶಿಕ್ಷಕರು ಹೆಚ್ಚಿನ ಸಂಬಳ ಪಡೆಯುತ್ತಿದ್ದು ಅದಕ್ಕಿಂತ ಕಡಿಮೆ ಪಗಾರಕ್ಕೆ ಬರಲು ಸಾಧ್ಯವಿಲ್ಲವಾದ್ದರಿಂದ ಈಗಷ್ಟೇ ಶಿಕ್ಷಕ ತರಬೇತಿ ಮುಗಿಸಿರುವ ಶಿಕ್ಷಕರಿಗೆ ಗಾಳ ಹಾಕಲಾಗುತ್ತಿದೆ. ಆದರೆ ಇಂಥ ಶಿಕ್ಷಕರಿಗೆ ಸುಮಾರು ಮೂರ‌್ಕಾಲ್ಕು ತಿಂಗಳು ತರಬೇತಿ ನೀಡಬೇಕು. ಇದಕ್ಕೂ ಮುನ್ನ ಅವರು ಪಾಠ ಮಾಡುವ ಕೌಶಲ ಪರೀಕ್ಷೆಯಾಗಬೇಕು. ಇಷ್ಟೆಲ್ಲ ಆಗುವ ವೇಳೆಗಾಗಲೇ ಶೈಕ್ಷಣಿಕ ವರ್ಷ ಅರ್ಧ ಮುಗಿದಿರುತ್ತದೆ ಇದು ಸರ್ಕಾರಿ ಶಾಲೆಗಳಲ್ಲಿ ಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ.
ಇಂಗ್ಲಿಷ್ ಶಿಕ್ಷಕರು ಸಿಗಲ್ಲ: ಮುಖ್ಯವಾಗಿ ಇಂಗ್ಲಿಷ್ ಭಾಷೆ ಬೋಧಿಸುವ ಶಿಕ್ಷಕರಿಗೆ ಹೆಚ್ಚು ಬೇಡಿಕೆ ಇದೆ, ಅಂಥ ಶಿಕ್ಷಕರಿಗೆ ಖಾಸಗಿ ಶಾಲೆಗಳಲ್ಲಿ ಸುಲಭವಾಗಿ ಉದ್ಯೋಗ ಸಿಗುತ್ತದೆ ಜತೆಗೆ ಉತ್ತಮ ವೇತನವೂ ಇರಲಿದೆ ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಸೇರಲು ಮುಂದೆ ಬರುವುದಿಲ್ಲ ಆದ್ದರಿಂದ ಸಾಮಾನ್ಯವಾಗಿ ಜಿಲ್ಲೆಯಲ್ಲಿ ಇಂಗ್ಲಿಷ್ ಭಾಷೆ ಬೋಧಿಸುವ ಶಿಕ್ಷಕರ ಕೊರತೆ ಹೆಚ್ಚು ಕಾಡುತ್ತಿದೆ.
ಸುಸಜ್ಜಿತ ಕಟ್ಟಡವಿದೆ, 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಲ ಮೂಲಸೌಕರ್ಯವೂ ಇದೆ. ಆದರೆ ಇಂಗ್ಲಿಷ್ ಬೋಧನೆ ಮಾಡುವ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಶಿಕ್ಷಕರನ್ನು ನಿಯೋಜಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಕಡಿಮೆ ಸಂಬಳ ಹಾಗೂ ಉದ್ಯೋಗ ಖಾತ್ರಿ ಇಲ್ಲ ಹಾಗೂ ತಿಂಗಳಿಗೆ ಸರಿಯಾಗಿ ವೇತನ ಪಾವತಿಯಾಗಲ್ಲ ಎಂಬ ಕಾರಣಕ್ಕೆ ಶಿಕ್ಷಕರು ಹಿಂದೇಟು ಹಾಕುತ್ತಿದ್ದಾರೆ.
ಮಾಳಯ್ಯ ಎಸ್‌ಡಿಎಂಸಿ ಅಧ್ಯಕ್ಷ
------
ಶಾಲೆಗಳ ಖಾಲಿ ಹುದ್ದೆ
ದೊಡ್ಡಬಳ್ಳಾಪುರ 150
ಹೊಸಕೋಟೆ 237
ನೆಲಮಂಗಲ 80
ದೇವನಹಳ್ಳಿ. 111
ಒಟ್ಟು 578
----------