

ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಪ್ರಸಕ್ತ ಸಾಲಿನ 2025-26 ನೇ ಸಾಲಿನ ತರಗತಿಗಳು ಶುಕ್ರವಾರ ಸಂಭ್ರಮದಿಂದ ಪ್ರಾರಂಭವಾಗಿದ್ದು ಎಲ್ಲ ಕಡೆ ಖುಷಿಯ ವಾತಾವರಣ ಕಂಡು ಬಂತು.
ಹೌದು! ತಳಿರು ತೋರಣಗಳಿಂದ ಸಿಂಗಾರ, ಗುಲಾಬಿ ಹೂವು ನೀಡುವುದರ ಜತೆಗೆ ಆರತಿ ಬೆಳಗಿ ಸ್ವಾಗತ, ಖುಷಿಯ ಮಾತುಗಳ ಸಂವಾದ, ಸವಿರುಚಿಯ ಸಿಹಿಯೂಟ, ಕಲಿಕೋಪಕರಣಗಳ ವಿತರಣೆ, ನಲಿ ಕಲಿ ಸೇರಿದಂತೆ ವಿವಿಧ ಚಟುವಟಿಕೆಯು ಸಂತಸದಲ್ಲಿ ನಿರ್ವಹಣೆಯಾಯಿತು. ಇದಕ್ಕೆ ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಸ್ಥಳಿಯ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಸಾಕ್ಷಿಯಾದರು.
ಇನ್ನು ನೆರೆಹೊರೆಯವರಿಗೆ ಪೈಪೋಟಿಯಾಗಿ ಸರ್ಕಾರಿ ಶಾಲೆಗಳಲ್ಲಿ ತಳಿರು ತೋರಣಗಳು, ಬಲೂನ್ಗಳಿಂದ ಸಿಂಗರಿಸಿ ಹಬ್ಬದ ವಾತಾವರಣ ನಿರ್ಮಿಸಲಾಗಿತ್ತು. ಮೊದಲ ದಿನದ ಸಂಭ್ರಮೋತ್ಸವದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಕೇಸರಿಬಾತ್, ಉಪ್ಪಿಟ್ಟು, ಶಾವಿಗೆ ಪಾಯಸ, ತರಕಾರಿ ಪಲಾವ್ ಬಡಿಸಲಾಯಿತು. ಅದರಲ್ಲೂ ಕಡ್ಡಾಯವಾಗಿ ಸಿಹಿ ತಿನಿಸುಗಳನ್ನು ಬಡಿಸಲಾಯಿತು. ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸಗಳನ್ನು ವಿತರಿಸಲಾಯಿತು.
ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಆಯಾ ವ್ಯಾಪ್ತಿಯಲ್ಲಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದ ದಾಖಲಾತಿ, ಕ್ರಿಯಾ ಯೋಜನೆ, ಶಾಲಾ ಪಂಚಾಂಗ, ಶುಚಿತ್ವ ಸಾಮಗ್ರಿಗಳು, ವರ್ಗಾವಣೆ ಪತ್ರಗಳ ತಯಾರು ಸೇರಿದಂತೆ ಹಲವು ದಾಖಲಾತಿಗಳನ್ನು ಪರಿಶೀಲಿಸಲಾಯಿತು.
ತಾಲೂಕಿನ ನಂದಿ ಶಾಲೆಯಲ್ಲಿ ಚಾಕಲೇಟ್, ಎ.ಕೊತ್ತೂರು ಶಾಲೆಯಲ್ಲಿ ಹೂವು, ಗೊಲ್ಲದೊಡ್ಡಿ ಶಾಲೆಯಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ನೀಡಿ ಸ್ವಾಗತಿಸಲಾಯಿತು.