ಮಕ್ಕಳ ಬೆಳವಣಿಗೆಯಲ್ಲಿ ಅಧ್ಯಾಪಕರ ಪಾತ್ರ ಹಿರಿದು

20 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶೈಕ್ಷಣಿಕ ವ್ಯವಸ್ಥೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಮಕ್ಕಳು ಸೃಜನಶೀಲರಾಗಿ ಪ್ರಜಾಸತ್ತಾತ್ಮಕ ಅಂಶಗಳನ್ನು ಮೈಗೂಡಿಸಿಕೊಂಡು ಬೆಳೆಯಲು ಈ ಹಂತ ಅತ್ಯಂತ ಮುಖ್ಯ. ಇಲ್ಲಿ ಅಧ್ಯಾಪಕರ ಪಾತ್ರ ಹಿರಿದಾದದು ಎಂದು ಮಕ್ಕಳ ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕಲಾಶಿಸಂ ಪ್ರತಿಷ್ಠಾನ ಮತ್ತು ಚಿಲಿಪಿಲಿ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ 2024ನೇ ಸಾಲಿನ ಮಕ್ಕಳ ಸಾಹಿತ್ಯ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪ್ರಶಸ್ತಿ ಪ್ರದಾನ, ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಶಾಲಾ ಹಂತದಲ್ಲಿ ಮಕ್ಕಳ ಶಿಕ್ಷಣವನ್ನು ಸಾಂಸ್ಕೃತಿಕ, ಸಾಹಿತ್ಯಿಕವಾಗಿ ಬಲಪಡಿಸಬೇಕಿದೆ. ಉನ್ನತ ಶಿಕ್ಷಣಕ್ಕೆ ಕೊಡುತ್ತಿರುವುದಕ್ಕಿಂತ ಹೆಚ್ಚಿನ ಒತ್ತನ್ನು ಮಕ್ಕಳ ಸೃಜನಶೀಲ ಬೆಳವಣಿಗೆಗೆ ಪೂರಕವಾಗಿ ಪ್ರಾಥಮಿಕ ಹಾಗೂ ಪ್ರೌಢ ಹಂತದ ಶಿಕ್ಷಣಕ್ಕೆ ನೀಡುವ ಅಗತ್ಯವಿದೆ ಎಂದರು.

ಡಾ. ಆನಂದ ಪಾಟೀಲ ಮಾತನಾಡಿ, ಮಕ್ಕಳ ಸಾಹಿತ್ಯಕ್ಕೆ ಅಕಾಡೆಮಿಕ್​ ಸ್ವರೂಪ ಬರಬೇಕಿದೆ. ಮಕ್ಕಳ ಸಾಹಿತ್ಯದ ಬೆಳವಣಿಗೆಗೆ ಕಲಾಶಿಸಂ ಪ್ರತಿಷ್ಠಾನ ಮತ್ತು ಡಾ. ನಿಂಗು ಸೊಲಗಿ ಅವರ ಪ್ರಯತ್ನ ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಂಕರ ಹಲಗತ್ತಿ ಮಾತನಾಡಿ, 50 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳು ಮತ್ತು 40 ಸಾವಿರಕ್ಕೂ ಹೆಚ್ಚು ಪ್ರೌಢ ಶಾಲೆಗಳು ಇದ್ದಾಗಲೂ, ಮಕ್ಕಳ ಸಾಹಿತ್ಯದ ಕೃತಿಗಳು ಮತ್ತು ಪತ್ರಿಕೆಗಳು ಮಾರಾಟವಾಗದಿರುವುದು ವಿಷಾದನೀಯ. ಶಿಕ್ಷಕರು ಮತ್ತು ಸಮಾಜ ಮಕ್ಕಳಲ್ಲಿ ಓದಿನ ಹವ್ಯಾಸ ಹೆಚ್ಚಿಸುವ ಅಗತ್ಯವಿದೆ ಎಂದರು.

ಮಕ್ಕಳ ಸಾಹಿತಿ ಚಂದ್ರಗೌಡ ಕುಲಕರ್ಣಿ ಅವರಿಗೆ ಕಲಾಶಿಸಂ ಪ್ರತಿಷ್ಠಾನದ ಗೌರವ ಪ್ರಶಸ್ತಿ ಮತ್ತು ಲೇಖಕಿ ವಸುವತ್ಸಲೆ ಅವರ "ಅಂತರಿದಲ್ಲಿ ವಿಹಾ' ಕೃತಿಗೆ ಅತ್ಯುತ್ತಮ ಮಕ್ಕಳ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು 10 ಸಾವಿರ ರೂ. ನಗದು, ಫಲಕ ಒಳಗೊಂಡಿದೆ. ಪುಸ್ತಕ ಪ್ರಶಸ್ತಿ 5 ಸಾವಿರ ರೂ. ನಗದು, ಫಲಕ ಒಳಗೊಂಡಿದೆ.

ಶಶಿಧರ ತೋಡಕರ, ಇತರರು ಇದ್ದರು. ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿದರು. ಡಾ. ನಿಂಗು ಸೊಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಿತಾ ಹಿರೇಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net