

ಅಕ್ಕಿಆಲೂರು: ಮಕ್ಕಳ ಸರ್ವತೋಮುಖ ಹಾಗೂ ಸಂಸ್ಕಾರಯುತ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದು ಎಂದು ಸ್ಥಳೀಯ ವಿರಕ್ತಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಚನ್ನವೀರೇಶ್ವರ ವಿರಕ್ತಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ಯಾಡಗುಪ್ಪಿ ಎಸ್ ಎಸ್. ಮೂರುಮಟ್ಟಿ ಗ್ರಾಮೀಣ ಚಾರಿಟೇಬಲ್ ಟ್ರಸ್ಟ್‌ನ ಭೂಮಿಕಾ ತರಬೇತಿ ಶಿಕ್ಷಣ ಸಂಸ್ಥೆಯ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬದಲಾಗುತ್ತಿರುವ ಇಂದಿನ ಆಧುನಿಕತೆಯಲ್ಲಿ ಶರಣರ ಸಂದೇಶ ಯುವ ಜನಾಂಗಕ್ಕೆ ತಲುಪಿಸಿದರೆ ಸಾತ್ವಿಕ ಸಮಾಜ ನಿರ್ಮಾಣಕ್ಕೆ ಅನುಕೂಲವಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಮಾತಮಾಡಿ, ಸರ್ಕಾರಿ ಶಾಲೆಗಳಲ್ಲಿ ಓದಿಸಬೇಕು ಎಂಬ ಗಟ್ಟಿ ನಿಲುವು ಸಮುದಾಯದಲ್ಲಿ ಮೂಡಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಎಸ್.ಎಸ್. ಮುರಮಟ್ಟಿ ಮಾತನಾಡಿ, ಮಕ್ಕಳಲ್ಲಿನ ಕಲೆ ಹೊರತೆಗೆದು ವೇದಿಕೆ ಕಲ್ಪಿಸಿ, ಸಾಮರ್ಥ್ಯ ಅನಾವರಣಗೊಳಿಸಲು ಶಾಲಾ ಕಾಲೇಜುಗಳು ಮುಂದಾಗಬೇಕು ಎಂದರು.
ಶಿಕ್ಷಕ ದಂಪತಿ ಗಿರೀಶ ದೊಡ್ಡಮನಿ ಹಾಗೂ ನೀಲಮ್ಮ ಮೂರಮಟ್ಟಿ ಸೇರಿ 15 ಜನ ರಕ್ತದಾನ ಮಾಡಿದರು. ರಾಣಿಬೆನ್ನೂರ ತಾಲೂಕಿನ ಹನುಮಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿ.ಎಸ್. ಭಗವಂತಗೌಡರ ಅವರಿಗೆ 5 ಸಾವಿರ ರೂ. ಗುರುಚೇತನ ಪುರಸ್ಕಾರ ನೀಡಲಾಯಿತು. ಕಲಕೇರಿಯ ಕಲಾವಿದ ಫಕೀರಪ್ಪ ಗೌರಕ್ಕನವರ ಅವರಿಗೆ ಕಲಾನಿಧಿ ಪ್ರಶಸ್ತಿ, ಕೂಡಲದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶಿವಪ್ಪ ತಳವಾರ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ, ಕಳೆದ ವರ್ಷ ಸಂಸ್ಥೆಯಲ್ಲಿ ತರಬೇತಿ ಪಡೆದು ಎಸ್‌ಎಸ್‌ಎಲ್‌ಸಿ ಇಂಗ್ಲಿಷ್ ಮಾಧ್ಯಮದಲ್ಲಿ ಹಾನಗಲ್ಲ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದ ಪುನೀತ್ ಲಮಾಣಿ ಹಾಗೂ ಕುಮಾರಿ ಗುಣವತಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ಶಿಬಿರಕ್ಕೆ ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಸಸಿ ನೀಡಲಾಯಿತು. ಕಂಚಿನೆಗಳೂರ ಸರ್ಕಾರಿ ಶಾಲೆಗೆ 10 ಸಾವಿರ ರೂ. ಕೊಡುಗೆ ನೀಡಲಾಯಿತು. ಕುಮಾರ ದೇಶಮುಖ, ಶಂಕ್ರಪ್ಪ ದೊಡ್ಡಮನಿ, ಚನ್ನಪ್ಪ ಮೂಗದೂರ, ಶ್ರೀನಿವಾಸ್ ಆರ್.ಟಿ, ಸದಾಶಿವ ಕಂಬಾಳಿ ಉಪಸ್ಥಿತರಿದ್ದರು.