ಪಾಠ ಮಾಡೋಕು ಸೈ, ಬಣ್ಣ ಬಳಿಯೋಕೂ ಸೈ ; ವಡ್ಡರಹಟ್ಟಿ ಶಾಲೆ ಕೊಠಡಿಗಳಿಗೆ ಸ್ವಂತ ಖರ್ಚಿನಲ್ಲಿ ಬಣ್ಣ ಬಳಿದ ಶಿಕ್ಷಕರು

25 MADHUGIRI 2
Published on

ಮಧುಗಿರಿ: ಸರ್ಕಾರಿ ಶಾಲೆ, ಶಿಕ್ಷಕರೆಂದರೆ ಮೂಗು ಮುರಿಯುವ ಈ ದಿನಗಳಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರು ಭಿನ್ನ ಹಾದಿ ತುಳಿದಿದ್ದಾರೆ. ತಮ್ಮ ಶಾಲೆಗಳ ಉಳಿವಿಗಾಗಿ ಶಿಕ್ಷಕರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಕರೊನಾ ಭೀತಿಯಿಂದ ಶಾಲೆಗಳ ಆರಂಭ ಸದ್ಯಕ್ಕೆ ಮರೀಚಿಕೆ ಎನಿಸಿದರೂ, ಪ್ರತಿ ದಿನ ಶಿಕ್ಷಕರ ಹಾಜರಾತಿ ಕಡ್ಡಾಯ. ಇದರಿಂದ ಶಾಲೆಗೆ ಹೋಗಿ ಸುಮ್ಮನೆ ವಾಪಸ್ ಬರುವುದರ ಬದಲು ಸುಣ್ಣಬಣ್ಣ ಕಾಣದೇ ಬಹಳಷ್ಟು ದಿನಗಳಾಗಿದ್ದ ಶಾಲೆಯ ಕಟ್ಟಡಗಳಿಗೆ ರಜಾ ದಿನಗಳಲ್ಲಿ ನಾವೇ ಏಕೆ ಬಣ್ಣ ಬಳಿಯಬಾರದೆಂಬ ಆಲೋಚನೆ ಶಿಕ್ಷಕರಿಗೆ ಬಂದಿದೆ.

ತಕ್ಷಣವೇ ಕಾರ್ಯಪ್ರವೃತ್ತರಾದ ತಾಲೂಕಿನ ಬ್ಯಾಲ್ಯ ಕ್ಲಸ್ಟರ್‌ನ ವಡ್ಡರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮುಖ್ಯಶಿಕ್ಷಕಿ ಕೆಂಪರಾಜಮ್ಮ, ಶಿಕ್ಷಕರಾದ ಪಾಪಣ್ಣ, ಶ್ರೀನಿವಾಸ್ ಮೂವರೂ ಜತೆಗೂಡಿ ಸ್ವಂತ ಖರ್ಚಿನಲ್ಲಿ ಪೇಂಟ್ ಖರೀದಿಸಿ ತಂದು ನುರಿತ ಪೇಂಟರ್‌ಗಳಿಗೂ ಸೆಡ್ಡು ಹೊಡೆಯುವಂತೆ ಶಾಲೆಯ ಕೊಠಡಿಗಳು, ಕಿಟಕಿ, ಬಾಗಿಲು, ಅಕ್ಷರ ದಾಸೋಹ ಕೊಠಡಿ, ಶಾಲಾ ಗೇಟ್, ಕಾಂಪೌಂಡ್ ಸೇರಿದಂತೆ ಸಂಪೂರ್ಣ ಶಾಲೆಗೆ ಬಣ್ಣ ಬಳಿದು ಸಿಂಗರಿಸಿದ್ದಾರೆ. ಮಕ್ಕಳ ಸ್ವಾಗತಕ್ಕೆ ಶಾಲೆಯನ್ನು ಅಣಿಗೊಳಿಸಿದ್ದಾರೆ.

ಶಾಲೆಯೇ ದೇಗುಲ: ಕರೊನಾ ಹಿನ್ನೆಲೆಯಲ್ಲಿ ತರಗತಿಗಳಿಲ್ಲದೆ ನಮಗೂ ಸುಮ್ಮನೇ ಬಂದು ಶಾಲೆಯಲ್ಲಿ ಕೂತು ಹೋಗುವುದಕ್ಕೆ ಮನಸ್ಸಾಗಲಿಲ್ಲ. ಹಾಗಾಗಿ ನಾವೇ ಬಣ್ಣ ಬಳಿಯುವ ಕೆಲಸಕ್ಕೆ ಕೈ ಹಾಕಿದೆವು. ಶಾಲೆ ನಮಗೆ ಅನ್ನ ನೀಡುತ್ತಿದ್ದು, ದೇವಾಲಯವಿದ್ದಂತೆ. ಅಲ್ಲದೇ, ನಮ್ಮ ಶಾಲೆ ಅಂದವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ. ಈ ಕಾರ್ಯಕ್ಕೆ ಸಿಆರ್‌ಪಿ ನವೀನ್ ಕುಮಾರ್ ಮತ್ತು ಶಾಲೆಯ ಶಿಕ್ಷಕರೂ ಕೈ ಜೋಡಿಸಿದ್ದಾರೆ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಕೆಂಪರಾಜಮ್ಮ.

ಸರ್ಕಾರಿ ಶಾಲೆ ಶಿಕ್ಷಕರು ಸ್ವಂತ ಖರ್ಚಿನಲ್ಲಿ ಬಣ್ಣ ಖರೀದಿಸಿ ಶಾಲೆ ಸಿಂಗರಿಸಿದ್ದಾರೆ. ಶಿಕ್ಷಕರು ಬಣ್ಣ ಬಳಿಯುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ನುರಿತ ಪೇಂಟರ್‌ಗಳಂತೆ ಕೆಲಸ ಮಾಡಿದ್ದಾರೆ. ಇವರ ಬಗ್ಗೆ ಹೆಮ್ಮೆಯೆನಿಸುತ್ತಿದೆ. ಎಂ.ರೇವಣಸಿದ್ದಪ್ಪ ಡಿಡಿಪಿಐ. ಮಧುಗಿರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net