

ಹೊಳೆನರಸೀಪುರ : ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸೋಮವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಗೆ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಶಾಲೆಗಳಿಗೆ ಬೀಗ ಜಡಿದು ಬೆಂಗಳೂರು ಚಲೋಗೆ ತೆರಳಿದ್ದರು.
ತಾಲೂಕಿನಲ್ಲಿ ಒಟ್ಟು ಒಂದರಿಂದ ಎಂಟನೇ ತರಗತಿಯವರೆಗೆ 245 ಶಾಲೆಗಳಿದ್ದು, ಸೋಮವಾರ ಬಹುತೇಕ ಶಿಕ್ಷಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಪರಿಣಾಮ 43 ಶಾಲೆಗಳು ಮಾತ್ರ ಬಾಗಿಲು ತೆರೆದು ಮಕ್ಕಳಿಗೆ ಶಿಕ್ಷಕರು ಪಾಠ ಮಾಡಿದ್ದಾರೆ. ತಾಲೂಕಿನಾದ್ಯಂತ 202 ಪ್ರಾಥಮಿಕ ಶಾಲೆಗಳು ಮುಚ್ಚಿದ್ದವು. 615 ಶಿಕ್ಷಕರಲ್ಲಿ 88 ಶಿಕ್ಷಕರು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದರು.
ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಕೆ.ಪಾಂಡು ಮಾತನಾಡಿ, ಶಾಲೆಗಳಿಗೆ ಬೀಗ ಹಾಕಿರುವ ಸಂಬಂಧ ಆಯಾಯ ಕ್ಲಸ್ಟರ್ ಸಿಆರ್‌ಪಿಗಳ ಮೂಲಕ ಮಾಹಿತಿ ಪಡೆದುಕೊಂಡಿದ್ದೇನೆ. ಈ ಸಂಬಂಧವಾಗಿ ನಮ್ಮ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತರುವುದಾಗಿ ಹೇಳಿದರು.