

ಲಿಂಗಸುಗೂರು: ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಮೀಕ್ಷೆಗೆ ಕರ್ತವ್ಯ ನಿರ್ವಹಿಸಿದ್ದ ಶಿಕ್ಷಕರಿಗೆ ಗೌರವ ಸಂಭಾವನೆ, ಗಳಿಕೆ ರಜೆಯನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದಿಂದ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ನ್ಯಾಯಮೂರ್ತಿ ಎಚ್.ಎನ್ ನಾಗಮೋಹನದಾಸ ಅವರ ಏಕ ಸದಸ್ಯ ಪೀಠದ ವಿಚಾರಣಾ ಆಯೋಗ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಮಗ್ರ ಸಮೀಕ್ಷೆ-2025 ಸಮೀಕ್ಷೆ ಕಾರ್ಯದಲ್ಲಿ ಬೇಸಿಗೆ ರಜೆಯಲ್ಲಿ 2025 ಮೇ 5 ರಿಂದ 2025 ಮೇ 28 ರವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢ ಶಾಲಾ ಸಹ ಶಿಕ್ಷಕರು, ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಗಣತಿದಾರರಾಗಿ ಮತ್ತು ಮೇಲ್ವಿಚಾರಕರಾಗಿ ಮನೆ-ಮನೆ ಸಮೀಕ್ಷಾ ಕರ್ತವ್ಯವನ್ನು ಯಶಸ್ವಿಗೊಳಿಸಿದ್ದಾರೆ.
ಕೆಸಿಎಸ್‌ಆರ್ ನಿಯಮಾನುಸಾರ ಬೇಸಿಗೆ ರಜೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಗಳಿಕೆ ರಜೆಗಳ ಸೌಲಭ್ಯ ಹಾಗೂ ನಿಗದಿ ಪಡಿಸಿರುವ ಸೂಕ್ತ ಗೌರವಧನ ಸಂಭಾವನೆಯನ್ನು ಶಿಕ್ಷಕರ ಖಾತೆಗೆ ಶೀಘ್ರದಲ್ಲಿ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು.
ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಅಮರೇಶಪ್ಪ ಹೂನೂರು, ಗಂಗಾಧರ, ರಂಗಣ್ಣ ದೊಡ್ಡಮನಿ, ರೆಹಮಾನ ಹವಾಲ್ದಾರ್, ಕವಿತಾ, ಅಚ್ಚಮ್ಮ, ನಾಗರತ್ನ ಇದ್ದರು.