

ಮೈಸೂರು: ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಬೇರಾರಿಗೂ ಸಿಗದ ಮಹತ್ವದ ಸ್ಥಾನಮಾನ, ಘನತೆ-ಗೌರವ ಶಿಕ್ಷಕರಿಗೆ ದೊರೆತ್ತಿದೆ. ಅವರು ಆತ್ಮ ಸಾಕ್ಷಿಗನುಗುಣವಾಗಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದರೆ ದೇವರಿಗಿಂತಲೂ ಮಿಗಿಲಾಗುತ್ತಾರೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕೃಷ್ಣಮೂರ್ತಿ ಪುರಂನ ನಮನ ಕಲಾ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಭಾರತರತ್ನ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಗೌರವಾರ್ಥ ಶಿಕ್ಷಕರ ದಿನ ಮತ್ತು ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಕರೆಂಬ ಗುರುದೇವರ ಬಗ್ಗೆ ವಿದ್ಯಾರ್ಥಿಗಳಿಗೆ ಗುರುಭಕ್ತಿ ಇದ್ದು ಶಿಕ್ಷಕರು ಹೇಳಿದಂತೆ ಶ್ರದ್ಧೆ, ಭಕ್ತಿ, ಪ್ರೀತಿ, ಪರಿಶ್ರಮ, ಕ್ರಿಯಾಶೀಲತೆ, ಸಮಯಪ್ರಜ್ಞೆ, ಆತ್ಮವಿಶ್ವಾಸ, ದೃಢತೆ, ಏಕಾಗ್ರತೆ, ಆಸಕ್ತಿಯಿಂದ ವಿದ್ಯೆ ಕಲಿತು ಸಾಧನೆಯತ್ತ ಸಾಗುವ ಪ್ರತಿಯೊಬ್ಬ ವಿದ್ಯಾರ್ಥಿಗೂ ತಾಯಿ ಶಾರದೆ ಒಲಿಯುತ್ತಾಳೆ ಎಂದರು.
ಶಿಕ್ಷಣ ಕ್ಷೇತ್ರ ಅತ್ಯಂತ ಪವಿತ್ರವಾದದ್ದು. ಹಾಗಾಗಿ ಇದು ರಾಜಕೀಯ ಮತ್ತು ರಾಜಕಾರಣದಿಂದ ಹೊರತಾಗಿರಬೇಕು. ಸರ್ಕಾರಗಳು ಬದಲಾದಂತೆ ಶಾಲಾ-ಕಾಲೇಜುಗಳ ಪಠ್ಯ ವಿಷಯಗಳು, ಪಠ್ಯ ಕ್ರಮಗಳು ಬದಲು ಮಾಡುವುದು ಸರಿಯಲ್ಲ. ಸರಿಯಾದ ಪ್ರಜ್ಞಾವಂತ ಶಿಕ್ಷಣ ತಜ್ಞರಿಂದ ರೂಪಿಸಿ ಒಮ್ಮೆ ಅಳವಡಿಸಲ್ಪಟ್ಟ ಪಠ್ಯಕ್ರಮಗಳು ಕನಿಷ್ಠ ಹತ್ತು ವರ್ಷಗಳಾದರೂ ಇರಬೇಕು. ಇಲ್ಲದಿದ್ದರೆ ಪಾಠ ಬೋಧಿಸುವ ಶಿಕ್ಷಕರಲ್ಲಿ ಹಾಗೂ ಕಲಿಯುವ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿ ಕಲಿಕೆಯ ಸಾಮರ್ಥ್ಯ ಮತ್ತು ಪ್ರಗತಿ ಕುಂಠಿತಗೊಳ್ಳುತ್ತದೆ. ದೇಶದ ಭವಿಷ್ಯವನ್ನು ಬರೆಯುವ ಶಿಕ್ಷಣ ಕ್ಷೇತ್ರ ಯಾವತ್ತೂ ಪರಿಶುದ್ಧವಾಗಿರಬೇಕು ಎಂದರು.
ಸಾಧಕ ಶಿಕ್ಷಕರಾದ ಬಾಗಳಿ ಮಹೇಶ್, ಸಿ.ಎಲ್.ಶರ್ಮಿಳಾ, ಎಂ.ಜಿ.ಸುಗುಣಾವತಿ, ಎಸ್.ಸಿ. ವೇದರತ್ನ, ತಸ್ಮೀನಾ ಬಾನು ಅವರಿಗೆ ಭಾರತ ರತ್ನ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಶಿಕ್ಷಣ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೆಯೇ ಶಿಕ್ಷಕ ಜಯಪ್ಪ ಹೊನ್ನಾಳಿ ಮತ್ತು ಶಿಕ್ಷಕಿ ಸುಗಂಧಮ್ಮ ಜಯಪ್ಪ ಅವರಿಗೆ ಮಹಾತ್ಮ ಜ್ಯೋತಿ ಬಾಪುಲೆ ಹಾಗೂ ಸಾವಿತ್ರಿ ಬಾಪುಲೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಂಸ್ಕೃತಿ ಚಿಂತಕ ಡಾ.ಕೆ.ರಘುರಾಮ್ ವಾಜಪೇಯಿ, ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ, ಸುತ್ತೂರಿನ ಜೆಎಸ್‌ಎಸ್ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುನಂದಾಭೂಪಾಳಿ, ಲೇಖಕಿ ಡಾ.ಲೀಲಾ ಪ್ರಕಾಶ್, ನಗರ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಶಿಕ್ಷಕ ಮಾಲಂಗಿ ಸುರೇಶ್ ಇದ್ದರು.