

ಶೃಂಗೇರಿ: ಗುಣಮಟ್ಟದ ಶಿಕ್ಷಣದ ಜತೆ ಸಂಸ್ಕಾರದಿಂದ ಮಕ್ಕಳ ಜೀವನ ಶೈಲಿ ಬದಲಾಯಿಸುವ ಚಾತುರ್ಯ ಶಿಕ್ಷಕರಲ್ಲಿ ಇರುವುದರಿಂದ ಅವರಿಗೆ ಸಮಾಜದಲ್ಲಿ ವಿಶೇಷ ಸ್ಥಾನವಿದೆ. ಗುರು ಮತ್ತು ಗುರಿ ಇದ್ದರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ವಕೀಲ ಸುಧೀರ್‌ಕುಮಾರ್ ಮುರೊಳ್ಳಿ ಹೇಳಿದರು.
ತಾಲೂಕು ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಗುರುಕುಲ ಪದ್ಧತಿಯಲ್ಲಿ ಗುರು ಮತ್ತು ಶಿಷ್ಯರ ನಡುವಿನ ಸಂಬಂಧ ಅನನ್ಯವಾಗಿತ್ತು. ಗುರು ಅಜ್ಞಾನ ಹೋಗಲಾಡಿಸಿ ಜ್ಞಾನ ನೀಡುವ ಶ್ರೇಷ್ಠ ಮಾರ್ಗದರ್ಶಕ. ಶಿಕ್ಷಕರು ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ನೇತಾರರು ಎಂದರು.
ಬಿಇಒ ಎನ್.ಜಿ.ರಾಘವೇಂದ್ರ ಮಾತನಾಡಿ, ಶಿಕ್ಷಕರು ಮೌಲ್ಯಾಧಾರಿತ ಚಿಂತನೆ ಬೆಳೆಸಿಕೊಳ್ಳಬೇಕು. ನಿಮ್ಮಲ್ಲಿರುವ ಸೃಜನಶೀಲತೆಯನ್ನು ಮಕ್ಕಳಲ್ಲಿ ಅನಾವರಣಗೊಳಿಸುವಲ್ಲಿ ಸಫಲರಾಗಬೇಕು ಎಂದರು.
ನಿವೃತ್ತ ಶಿಕ್ಷಕರಾದ ಎನ್.ಆರ್.ಸತ್ಯನಾರಾಯಣ, ಎಸ್.ಎಲ್.ಶೈಲಾಜಾ, ಎಂ.ಎಸ್.ರಾಧಾಕೃಷ್ಣ , ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಹೆಚ್ಚು ಫಲಿತಾಂಶ ಪಡೆದ 13 ಪ್ರೌಢಶಾಲೆಗಳ ಮುಖ್ಯಶಿಕ್ಷಕರನ್ನು ಸನ್ಮಾನಿಸಲಾಯಿತು.
ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ಉಪಾಧ್ಯಕ್ಷೆ ಸುನೀತಾ, ಮಮತಾ ಉದಯ್, ಕ್ಷೇತ್ರ ಸಮನ್ವಯ ಅಧಿಕಾರಿ ಗಂಗಾಧರಪ್ಪ, ದೈಹಿಕ ಶಿಕ್ಷಣ ಪರೀವೀಕ್ಷಕ ಸಿದ್ದರಾಜು, ತಾಲೂಕು ನೋಡೆಲ್ ಅಧಿಕಾರಿ ವಿಜಯ್‌ಕುಮಾರ್ ಇದ್ದರು.