

ಗುಳೇದಗುಡ್ಡ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ. ಅದ್ದರಿಂದ ಅವರು ಕಲಿಸಿದ ಪಾಠವನ್ನು ಶ್ರದ್ಧೆಯಿಂದ ಆಲಿಸುವ ಮೂಲಕ ಗುರಿ ತಲುಪಲು ಸಾಧ್ಯ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿಠ್ಠಲ ಕಳಸಾ ಹೇಳಿದರು.
ಮಡಿವಾಳಪ್ಪ ಹುಚ್ಚಪ್ಪ ಆಡಿನ ಕನ್ನಡ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ 7ನೇ ತರಗತಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಗತ್ತನ್ನು ಬದಲಿಸುವ ಶಕ್ತಿ ಶಿಕ್ಷಣಕ್ಕಿದೆ. ಗಳಿಸಿದ ಸಂಪತ್ತನ್ನು ಕಳೆದುಕೊಳ್ಳಬಹುದು. ಆದರೆ, ವಿದ್ಯೆ ಎಂದಿಗೂ ಕಳೆದು ಹೋಗುವುದಿಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಓದಿನ ಕಡೆ ಗಮನ ನೀಡುವುದು ಅವಶ್ಯವಾಗಿದೆ ಎಂದರು.
ಸಂಸ್ಥೆ ಉಪಾಧ್ಯಕ್ಷ ಎಸ್.ವಿ. ಬನ್ನಿ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ಸಮಯ ವ್ಯರ್ಥ ಮಾಡದೆ ಸತತ ಪರಿಶ್ರಮದಿಂದ ಓದಿ ಗುರಿ ತಲಪಬೇಕು ಎಂದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಸಂಸ್ಥೆ ಕಾರ್ಯದರ್ಶಿ ಮಲ್ಲಿಕಾರ್ಜುನ ತಾಂಡೂರ, ಪಿ.ಎನ್. ಪವಾರ, ರವಿ ಶೇಬಿನಕಟ್ಟಿ, ಮುಖ್ಯ ಶಿಕ್ಷಕ ಎನ್.ವಿ. ದೊಡಮನಿ, ಎಸ್.ವಿ. ಬಂತಲ್, ಶಿಕ್ಷಕರಾದ ಅಕ್ಷತಾ ಪಾಟೀಲ, ವಿವೇಕಾನಂದ ದೇವಾಂಗಮಠ, ಕಾವ್ಯಾ ಶಿರೂರ, ಕಾವೇರಿ ಸಿರಗುಂಪಿ, ಎಂ.ಎಸ್. ಹಿರೇಮಠ, ಕೆ.ಎಸ್. ರಂಜಣಗಿ, ಎಸ್.ಎಸ್. ಶಿಪ್ರಿ, ಎಸ್.ಎ. ಶೇಖಾ ಮತ್ತಿತರರಿದ್ದರು. ಬಳಿಕ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆಯಿತು.