

ಸದೇಶ್ ಕಾರ್ಮಾಡ್ ಮೈಸೂರು
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯು ಜಿಲ್ಲೆಯ ಶಿಕ್ಷಕರಿಗೆ ಹತ್ತಾರು ಸಮಸ್ಯೆ ಗಳನ್ನು ತಂದೊಡ್ಡಿದೆ. ಹಲವು ಸಮಸ್ಯೆಗಳ ನಡುವೆ ಸಮೀಕ್ಷೆ ಪೂರ್ಣಗೊಳಿಸುವ ಕಾರ್ಯದಲ್ಲಿ ಶಿಕ್ಷಕರು ತೊಡಗಿದ್ದಾರೆ.
ಜಿಲ್ಲೆಯಲ್ಲಿ ಸಮೀಕ್ಷೆಯು ಸೆ.26 ರಿಂದ ಪ್ರಾರಂಭಗೊಂಡಿದ್ದು, ಅ.7 ರಂದು ಮುಕ್ತಾಯಗೊಳ್ಳಲಿದೆ. ಸಮೀಕ್ಷೆಯನ್ನು ನಿಗದಿ ದಿನಾಂಕ ದೊಳಗೆ ಮುಕ್ತಾಯಗೊಳಿಸಬೇಕಾಗಿರುವ ಹಿನ್ನೆಲೆಯಲ್ಲಿ ಪ್ರತಿದಿನ 50 ಮನೆಗಳ ಸಮೀಕ್ಷೆ ಕೈಗೊಳ್ಳುವಂತೆ ಗುರಿ ನೀಡಲಾಗಿದೆ. ಹಾಗಾಗಿ ಶಿಕ್ಷಕರು ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು ಎಂದು ಅಧಿಕಾರಿಗಳು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಇನ್ನಿಲ್ಲದ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾತ್ರಿ 8ರವರೆಗೆ ಕರ್ತವ್ಯ ನಿರ್ವಹಿಸಬೇಕು ಎಂದಾದರೆ ಶಿಕ್ಷಕಿಯರಿಗೆ ರಕ್ಷಣೆ ನೀಡುವವರು ಯಾರು? ಏನಾದರು ಅನಾಹುತ ಆದರೆ ಅದಕ್ಕೆ ಯಾರು ಹೊಣೆ ಎಂದು ಶಿಕ್ಷಕಿಯರು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. ಆದರೆ, ಅಧಿಕಾರಿಗಳಿಂದ ಸೂಕ್ತ ಉತ್ತರ ದೊರೆಯುತ್ತಿಲ್ಲ.
ಸಮಸ್ಯೆಗಳೇನು?:
ಸಮೀಕ್ಷೆಗೆ ನೀಡಿರುವ ರೂಟ್‌ಮ್ಯಾಪ್ ಸಮರ್ಪಕವಾಗಿಲ್ಲ ಎಂಬುದು ಬಹುತೇಕ ಶಿಕ್ಷಕರ ದೂರು. ಒಂದು ಮನೆಯ ಸಮೀಕ್ಷೆ ಪೂರ್ಣಗೊಳಿಸಿ ಪಕ್ಕದ ಮನೆಯ ಸಮೀಕ್ಷೆಗೆ ತೆರಳಿದಾಗ ಆ ಮನೆಯ ಸಮೀಕ್ಷೆಯ ಜವಾಬ್ದಾರಿಯನ್ನು ಮತ್ತೊಂದು ಶಿಕ್ಷಕರಿಗೆ ಹಂಚಿಕೆ ಮಾಡಲಾಗಿದೆ. ಅಕ್ಕ ಪಕ್ಕದ ಮನೆಗಳನ್ನು ಒಬ್ಬ ಶಿಕ್ಷಕರಿಗೆ ಹಂಚಿಕೆ ಮಾಡದೆ ಮನಬಂದಂತೆ ಹಂಚಿಕೆ ಮಾಡಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಮನೆಗಳನ್ನು ಹುಡುಕಿ ಅಲೆಯುವ ಪರಿಸ್ಥಿತಿ ಇದೆ.
ಸಮೀಕ್ಷೆಗೆ ಮನೆ ಮನೆಗಳಲ್ಲಿ ಅಂಟಿಸಿರುವ ಯುಎಚ್‌ಡಿ ನಂಬರ್ ಆಧಾರದ ಮೇಲೆ ಶಿಕ್ಷಕರು ಸಮೀಕ್ಷೆ ಪೂರ್ಣಗೊಳಿಸಬೇಕಾಗಿದೆ. ವಾಸವಿಲ್ಲದ ಮನೆಗಳಲ್ಲೂ ಈ ಸ್ಟಿಕ್ಕರ್ ಅಂಟಿಸಲಾಗಿದೆ. ಕೆಲವು ಕಡೆಗಳಲ್ಲಿ ತೋಟದ ಮನೆಗಳಲ್ಲೂ ಅಳವಡಿಸಲಾಗಿದೆ. ಅಲ್ಲಿ ಯಾರೂ ವಾಸ ಇಲ್ಲ. ಹೀಗಾಗಿ ಶಿಕ್ಷಕರು ಪ್ರತಿಯೊಂದು ಮನೆಗಳಿಗೆ ಅನಗತ್ಯವಾಗಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಮನೆಗಳಲ್ಲಿ ಸಮೀಕ್ಷೆಗೆ ಸೂಕ್ತ ಸಹಕಾರ ದೊರೆಯುತ್ತಿಲ್ಲ. ಹೀಗಾಗಿ ಶಿಕ್ಷಕರಿಗೆ ಸಮೀಕ್ಷೆ ಪೂರ್ಣಗೊಳಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಆದರೆ, ನಿಗದಿ ಪಡಿಸಿದಷ್ಟು ಗುರಿ ಸಾಧನೆ ಆಗದೆ ಇದ್ದರೆ ಶಿಕ್ಷೆಗೆ ಗುರಿಯಾಗುವ ಆತಂಕ ಎದುರಿಸುತ್ತಿದ್ದಾರೆ.
ಸಮೀಕ್ಷೆಗೆ ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅವಶ್ಯಕ. ರೇಷನ್ ಕಾರ್ಡ್ ಇದ್ದರೆ ಕುಟುಂ ಬದ ಮುಖ್ಯಸ್ಥರೊಬ್ಬರ ಆಧಾರ್ ಒಟಿಪಿ ಪಡೆದು ಸಮೀಕ್ಷೆ ಪೂರ್ಣಗೊಳಿಸಬಹುದು. ರೇಷನ್ ಕಾರ್ಡ್ ಇಲ್ಲದೆ ಹೋದರೆ ಕುಟುಂಬದಲ್ಲಿರುವ ಎಲ್ಲ ಸದಸ್ಯರ ಆಧಾರ್ ನಂಬರ್ ಹಾಗೂ ಒಟಿಪಿ ಪಡೆದು ದಾಖಲಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಸದಸ್ಯರ ಮಾಹಿತಿಯನ್ನು ಕೇಳಿ ಅಪ್ಲೋಡ್ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಸಮೀಕ್ಷೆಯಲ್ಲಿ 60 ಪ್ರಶ್ನಾವಳಿಗಳು ಇದ್ದು, ಇವುಗಳನ್ನು ಭರ್ತಿ ಮಾಡಲು ಕನಿಷ್ಠ ಅರ್ಧ ಅಥವಾ 1 ಗಂಟೆಯ ಅವಶ್ಯಕತೆ ಇದೆ.
ಮೈಸೂರು ನಗರದಲ್ಲಿ ಜನಸಂಖ್ಯೆ ಹೆಚ್ಚು ಇರುವ ಹಿನ್ನೆಲೆಯ ಜಿಲ್ಲೆಯ ಎಲ್ಲ ತಾಲೂಕುಗಳಿಂದ ತಲಾ 80 ಶಿಕ್ಷಕರನ್ನು ಮೈಸೂರು ನಗರದಲ್ಲಿ ಸಮೀಕ್ಷೆ ಕೈಗೊಳ್ಳಲು ನಿಯೋಜಿಸಲಾಗಿದೆ. ಈ ಶಿಕ್ಷಕರ ಪೈಕಿ ಹಲವರಿಗೆ ನಗರದ ಪರಿಚಯ ಹೆಚ್ಚಾಗಿ ಇಲ್ಲದ ಹಿನ್ನೆಲೆಯಲ್ಲಿ ಮನೆಗಳನ್ನು ಹುಡುಕಲು ಸಮಸ್ಯೆ ಎದುರಿಸುತ್ತಿದ್ದಾರೆ. ಮನೆಗಳನ್ನು ಗುರುತಿಸಲು ಗೂಗಲ್ ಮ್ಯಾಪ್ ಇದ್ದರೂ ಅದು ನಿರ್ದಿಷ್ಟವಾದ ಮನೆಗಳನ್ನು ಗುರುತಿಸಲು ಕೆಲವು ಶಿಕ್ಷಕರಿಗೆ ಸಮಸ್ಯೆ ಎದುರಾಗುತ್ತಿದೆ. ಅನಾರೋಗ್ಯ, ಅಂಗವಿಕಲತೆ ಸಮಸ್ಯೆ ಎದುರಿಸುತ್ತಿರುವವರನ್ನು ಗುರುತಿಸಿ ಸಮೀಕ್ಷೆಯಿಂದ ಹೊರಗೆ ಇಡಲಾಗಿದೆ. ಆದರೆ, ಕೆಲವು ಅನಾರೋಗ್ಯ ಪೀಡಿತರು ಈ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದೆ ಅನಾರೋಗ್ಯ ಸಮಸ್ಯೆಯ ನಡುವೆಯೂ ಸಮೀಕ್ಷೆ ಕೈಗೊಳ್ಳುತ್ತಿದ್ದಾರೆ. ಶಿಕ್ಷಕರ ಸಂಘದ ಕೆಲವು ಪದಾಧಿಕಾರಿಗಳು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಸಮೀಕ್ಷೆಯಿಂದ ಹೊರಗೆ ಉಳಿದಿ ದ್ದಾರೆ. ಅವರನ್ನು ಏತಕ್ಕೆ ಸಮೀಕ್ಷೆಗೆ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂಬುದು ಶಿಕ್ಷಕರ ಪ್ರಶ್ನೆಯಾಗಿದೆ. ಕೆಲವರಿಗೆ ಮೊಬೈಲ್ ಬಳಕೆ ಮಾಡಲು ಸರಿಯಾಗಿ ಬರುವುದಿಲ್ಲ. ಅಂತಹ ಶಿಕ್ಷಕರು ತಮ್ಮ ಕುಟುಂಬದ ಸದಸ್ಯರನ್ನು ಸಮೀಕ್ಷೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಮೀಕ್ಷೆ ಪ್ರಾರಂಭ ಮಾಡಿದ ಸಂದರ್ಭ ಸಮೀಕ್ಷೆಯ ಆ್ಯಪ್ ನಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳುತಿತ್ತು. ಆದರೆ, ಇದೀಗ ಈ ಸಮಸ್ಯೆಯನ್ನು ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ.
7 ಸಾವಿರ ಗಣತಿದಾರರು
ಸಮೀಕ್ಷೆಗೆ ಜಿಲ್ಲೆಯಲ್ಲಿ 7,686 ಗಣತಿದಾರರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇದರ ಜತೆಗೆ 149 ಮಾಸ್ಟರ್ ಟ್ರೈನರ್, 389 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಸಮೀಕ್ಷೆ ಸಂದರ್ಭ ಗಣತಿದಾರರು ಜನರ ಶೈಕ್ಷಣಿಕ ಮಟ್ಟ, ಆರ್ಥಿಕ ಸ್ಥಿತಿಗತಿ, ಜಾತಿ, ಉಪ ಜಾತಿ, ಕೌಶಲ, ಇತರೆ ಸಾಮಾಜಿಕ ಅಂಶ ಸೇರಿದಂತೆ 60 ಪ್ರಶ್ನೆಗಳಿಗೆ ಉತ್ತರ ಪಡೆಯಬೇಕಾಗಿದೆ. ಸಮೀಕ್ಷೆಯಲ್ಲಿ ದೊರೆಯುವ ಅಂಕಿ ಅಂಶದ ಆಧಾರದ ಮೇಲೆ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಉದ್ದೇಶಿಸಿದೆ.
ನೆಟ್‌ವರ್ಕ್ ಸಮಸ್ಯೆ
ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್ ಸಿಗದೆ ಶಿಕ್ಷಕರು ಸಮಸ್ಯೆ ಎದುರಿಸುತ್ತಿದ್ದಾರೆ. ಸಮೀಕ್ಷೆ ಪೂರ್ಣಗೊಳಿಸಲು ನೆಟ್‌ವರ್ಕ್ ಅತ್ಯವಶ್ಯಕ. ಹೀಗಾಗಿ ನಿಗದಿತ ಗುರಿ ಸಾಧನೆ ಮಾಡಲು ಕೆಲವು ಶಿಕ್ಷಕರಿಗೆ ಸಾಧ್ಯವಾಗುತ್ತಿಲ್ಲ. ನಗರ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ ಇಲ್ಲ. ಆದರೆ, ನಗರದಲ್ಲಿ ಸಾಕಷ್ಟು ಜನರು ತಮ್ಮ ಮಾಹಿತಿಗಳನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ. ಕೆಲವರು ಶಿಕ್ಷಕರೊಂದಿಗೆ ವಾಗ್ವಾದಕ್ಕೂ ಇಳಿದ ಘಟನೆ ನಡೆದಿದೆ.
ಬಿಪಿಎಲ್ ಕಾರ್ಡ್ ರದ್ದಾಗುವ ಆತಂಕ
ಈ ಸಮೀಕ್ಷೆಯಿಂದ ನಮ್ಮ ಸಾಮಾಜಿಕ, ಆರ್ಥಿಕ ಹಾಗೂಶೈಕ್ಷಣಿಕ ಸ್ಥಿತಿಗತಿ ಸರ್ಕಾರಕ್ಕೆ ತಿಳಿದು ನಮಗೆ ಬರುತ್ತಿರುವ ನಮ್ಮ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ, ಗೃಹಲಕ್ಷ್ಮೀ ಹಣ ಬರುವುದು ನಿಂತು ಹೋಗುತ್ತದೆ ಎಂಬ ಭಯ ಕೆಲವರಿಗೆ ಇದ್ದು, ಈ ಕಾರಣಕ್ಕೆ ಕೆಲವರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.