

ಗೋಕಾಕ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಭವಿಷ್ಯ ನಿರ್ಮಿಸುವುದರೊಂದಿಗೆ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ ಎಂದು ಲಕ್ಷ್ಮೀ ಎಜುಕೇಷನ್ ಟ್ರಸ್ಟಿನ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ ಹೇಳಿದರು.
ನಗರದ ಲಕ್ಷ್ಮೀ ಎಜುಕೇಷನ್ ಟ್ರಸ್ಟನ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ಶಿಕ್ಷಕರ ಸೇವೆ ನೆನಪಿಸುವ ಸುದಿನ. ಶಿಕ್ಷಕರ ಪರಿಶ್ರಮದಿಂದಲೇ ಇಂದು ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದೆ. ಸಂಸ್ಥೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವತ್ತ ಸಹ ನಿರ್ದೇಶಕ ಗಜಾನನ ಮನ್ನಿಕೇರಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು. ಸಂಸ್ಥೆಯ ಉಪಾಧ್ಯಕ್ಷೆ ಸುವರ್ಣಾ ಜಾರಕಿಹೊಳಿ ಉದ್ಘಾಟಿಸಿದರು. ಆಡಳಿತಾಧಿಕಾರಿ ಬಿ.ಕೆ. ಕುಲಕರ್ಣಿ, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಎ.ಬಿ. ಪಾಟೀಲ, ಡಾ.ಜಿ.ಆರ್. ನಿಡೋಣಿ, ಡಾ.ಐ.ಎಸ್. ಪವಾರ, ಅರುಣ ಪೂಜೇರ, ಎಚ್.ಎಸ್. ಅಡಿಬಟ್ಟಿ, ಎ.ಎಂ. ಸರಕಾವಸ, ಪಿ.ವಿ. ಚಚಡಿ ಇದ್ದರು.