

ಹುಬ್ಬಳ್ಳಿ: ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕರಿಬ್ಬರು ಶಾಲೆಯಲ್ಲಿ ಪರಸ್ಪರ ಜಗಳವಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡ ಟನೆ ಇಲ್ಲಿನ ನೇಕಾರ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
ಶಿಕ್ಷಣ ಇಲಾಖೆ ಆಯುಕ್ತರ ಆದೇಶದಂತೆ ಪ್ರತಿದಿನ ಶಾಲೆಗೆ 15 ನಿಮಿಷ ಮುಂಚಿತವಾಗಿ ಅಂದರೆ ಬೆಳಗ್ಗೆ 9.45ಕ್ಕೆ ಬರಬೇಕು. ತಡವಾಗಿ ಆಗಮಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಶಾಲೆಯ ಮುಖ್ಯೋಪಾಧ್ಯಾಯ ಎಸ್.ವೈ.ವಿಭೂತಿ ಅವರು ಶುಕ್ರವಾರ ಸಭೆಯಲ್ಲಿ ಸಹ ಶಿಕ್ಷಕರು ಹಾಗೂ ಸಿಬ್ಬಂದಿಗೆ ಸೂಚಿಸಿದ್ದರು.
ಆ ದಿನ ರಜೆ ಮೇಲೆ ಇದ್ದ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಂ.ದೊಡ್ಡವಾಡ ಶನಿವಾರ ಶಾಲೆಗೆ ಆಗಮಿಸಿದಾಗ ಈ ಕುರಿತು ಸಹ ಶಿಕ್ಷಕರು ಮಾಹಿತಿ ನೀಡಿದ್ದರು. ಇದೇ ವಿಚಾರವಾಗಿ ದೊಡ್ಡವಾಡ ಅವರು, ಮುಖ್ಯೋಪಾಧ್ಯಾಯರಿಗೆ ನಿಂದಿಸಲು ಮುಂದಾಗಿದ್ದರು. ಅವರು ಮೊದಲು ಸರಿಯಾದ ಸಮಯಕ್ಕೆ ಬರಲಿ. ಅವರೇ ಸರಿಯಾಗಿ ಬರಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಬಳಿಕ ಮುಖ್ಯೋಪಾಧ್ಯಾಯ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನಡುವೆ ತೀವ್ರ ವಾಗ್ವಾದ ನಡೆಯಿತು. ಸಹಶಿಕ್ಷಕರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದರು.
ಶಿಕ್ಷಕರ ನಡುವೆ ನಡೆದ ಜಗಳ ಕುರಿತು ಡಿಡಿಪಿಐ ಹಾಗೂ ತಾವೂ ವಿಚಾರಣೆ ನಡೆಸಿದ್ದು, ತಪ್ಪಿತಸ್ಥರಿಗೆ ಬುಧವಾರ ನೋಟಿಸ್ ನೀಡಲಾಗುವುದು. ಅಗತ್ಯ ಬಿದ್ದರೆ ಬೇರೆಡೆ ವರ್ಗಾವಣೆ ಮಾಡಲಾಗುವುದು. > ಚನ್ನಪ್ಪಗೌಡ, ಬಿಇಒ, ಹುಬ್ಬಳ್ಳಿ ಶಹರ