

ಹುಬ್ಬಳ್ಳಿ: ಶಾಲಾ ಶಿಕ್ಷಕರಿಗೆ ಚುನಾವಣಾ ಸೇರಿ ವಿವಿಧ ಕಾರ್ಯಕ್ಕೆ ನಿಯೋಜಿಸುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಸರ್ಕಾರಿ ಪ್ರೌಢ ಶಾಲಾ ಸಂಘ ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದಿಂದ ನಗರದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಧಾರವಾಡವನ್ನು ವಿದ್ಯಾಕಾಶಿ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅನೇಕ ಶೈಕ್ಷಣಿಕ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಇಂಥದ್ದರಲ್ಲಿ ಬಿಎಲ್‌ಒ ಕಾರ್ಯಕ್ಕೆ ಶಿಕ್ಷಕರನ್ನು ಬಳಸಿಕೊಳ್ಳುತ್ತಿರುವುದು ಖಂಡನೀಯ. ಬೋಧನಾ ಕಾರ್ಯಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಂಘದ ಪದಾಧಿಕಾರಿಗಳು ವಿನಂತಿಸಿದರು.
ಸ್ಪಂದಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಕೂಡಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಹಾಗೂ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಅವರಿಗೆ ಕರೆ ಮಾಡಿ ವಿಷಯ ವಿವರಿಸಿದರು. ಒಪ್ಪಿದ ಮುಖ್ಯ ಕಾರ್ಯದರ್ಶಿಗಳು ಈ ಬಗ್ಗೆ ಆದೇಶ ಹೊರಡಿಸುವುದಾಗಿ ತಿಳಿಸಿದರು.
ವಿವಿಧ ಸಂಘದ ಪದಾಧಿಕಾರಿಗಳಾದ ವಿ.ಎಸ್. ಹುದ್ದಾರ, ಎಸ್.ವಿ. ಪಟ್ಟಣಶೆಟ್ಟಿ, ರವಿ ಕೊಣ್ಣೂರ, ಆರ್.ಎಸ್. ಗೂಳೇರ, ಅಂಜನಪ್ಪ, ಎಂ.ಎಚ್. ಜಂಗಳಿ, ಎಂ.ಯು. ಶಿರಹಟ್ಟಿ, ಎಸ್.ಎಲ್. ಪಾಟೀಲ, ಶಾಹಿನಾ ಬೇಗಂ, ಎಸ್.ಬಿ. ಹಿರೇಮಠ, ಎಸ್. ಸುಬ್ಬಾರಾವ್, ವಿಶ್ವನಾಥ ಹಿರೇಮಠ, ಬಿ.ವೈ. ಹೊಸಮನಿ, ಪಿ.ಸಿ. ವಲಮಣ್ಣವರ ಇತರರು ಇದ್ದರು.