ಶಿಕ್ಷಕರಿಗೆ ‘ಅಪಾರ್’ ಕಾರ್ಯಭಾರ ಬೇಡ; ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ ಒತ್ತಾಯ

APAR ID
ವಿಜಯಪುರ ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದಗೆ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ ಶೆಡಶ್ಯಾಳ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ವಿಜಯಕುಮಾರ ಹತ್ತಿ, ಬಿ.ಟಿ. ಗೌಡರ, ಜಗದೀಶ ಬೋಳಸೂರ ಮತ್ತಿತರರಿದ್ದಾರೆ.
Published on

ವಿಜಯಪುರ: ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಕ್ಕಳ ಅಪಾರ್ ಐಡಿ ಜನರೇಟ್ ಮಾಡಲು ಸೂಚಿಸಲಾಗಿದ್ದು, ಇದರಿಂದ ಶಿಕ್ಷಕರಿಗೆ ತುಂಬಾ ತೊಂದರೆಯುಂಟಾಗಿದೆ. ಕೂಡಲೇ ಶಿಕ್ಷಕರನ್ನು ಈ ಜವಾಬ್ದಾರಿಯಿಂದ ಕೈಬಿಡಬೇಕೆಂದು ಒತ್ತಾಯಿಸಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ ಶೆಡಶ್ಯಾಳ ನೇತೃತ್ವದಲ್ಲಿ ಮಂಗಳವಾರ ಸಿಇಒ ರಿಷಿ ಆನಂದಗೆ ಮನವಿ ಸಲ್ಲಿಸಲಾಯಿತು.

ಸುರೇಶ ಶೆಡಶ್ಯಾಳ ಮಾತನಾಡಿ, ಅಪಾರ್ ಐಡಿ ಜನರೇಟ್ ಮಾಡುವ ಬಗ್ಗೆ ಶಿಕ್ಷಕರಿಗೆ ಸಮರ್ಪಕ ತರಬೇತಿ ಇಲ್ಲದ ಕಾರಣ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರಿಗೆ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಬಳಕೆ ಸೌಲಭ್ಯ ಇಲ್ಲದಿರುವುದರಿಂದ ಸಾಕಷ್ಟು ಸಮಸ್ಯೆ ಉಂಟಾಗಿದೆ ಎಂದರು.

ಶೇ.90 ಮಕ್ಕಳ ಆಧಾರ್ ಕಾರ್ಡ್ ನಲ್ಲಿ ಅಕ್ಷರಗಳು ಲೋಪದೋಷಗಳಿಂದ ಕೂಡಿವೆ. ಇದರಿಂದ ಜನರೇಟ್ ಆಗಲು ತುಂಬಾ ಸಮಸ್ಯೆಯಾಗುತ್ತಿದೆ. ಕಾರಣ ಅಪಾರ್ ಐಡಿ ಕ್ರಿಯೇಟ್ ಮಾಡುವುದನ್ನು ತಡೆಹಿಡಿಯಬೇಕೆಂದರು.

ಅಲ್ಲದೆ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರಿಗೆ ಬಿಸಿಯೂಟದ ಕೆಲಸ, ಮೊಟ್ಟೆ, ಶೇಂಗಾ ಚಿಕ್ಕಿ, ಬಾಳೆಹಣ್ಣು ವಿತರಣೆ ಹಾಗೂ ಅಕ್ಷರ ದಾಸೋಹದ ಲೆಕ್ಕಪತ್ರ ನಿರ್ವಹಣೆ, ಕೆಲವು ಮುಖ್ಯ ಶಿಕ್ಷಕರಿಗೆ ಬಿಎಲ್‌ಒ ಕಾರ್ಯದೊತ್ತಡ ಹೀಗೆ ಅನೇಕ ಕೆಲಸಗಳ ಒತ್ತಡದಿಂದ ಆರೋಗ್ಯ ಹದಗೆಡುತ್ತಿದೆ. ಈ ಎಲ್ಲ ಕಾರ್ಯಗಳಿಂದ ಶಿಕ್ಷಕರಿಗೆ ಮುಕ್ತಿ ನೀಡಬೇಕು ಎಂದರು.

ವಿಜಯಕುಮಾರ ಹತ್ತಿ, ಬಿ.ಟಿ. ಗೌಡರ, ಜಗದೀಶ ಬೋಳಸೂರ, ನೀಜು ಮೇಲಿನಕೇರಿ, ಮುತ್ತು ಪೂಜಾರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net