

ಮೈಸೂರು: ಯಾವ ನಾಡಿನಲ್ಲಿ ಜನರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗುತ್ತಾರೋ ಅಂತಹ ನಾಡಿನಲ್ಲಿ ಜನರು ಆಡಳಿತ, ಅಭಿವೃದ್ಧಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ವಂಚನೆಗೆ ಒಳಗಾಗುತ್ತಾರೆ. ಇದು ಜಾಗತಿಕವಾದ ಸತ್ಯ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಗರದ ಕಲಾಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಮರೆತರೆ ಅಥವಾ ಆ ಕ್ಷೇತ್ರಕ್ಕೆ ಅಸಹಕಾರ ನೀಡದಿದ್ದರೆ ಅದಕ್ಕಿಂತ ದುರಂತ ಮತ್ತೊಂದು ಇಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರ ವಿವಿಧ ಭಾಗ್ಯಗಳನ್ನು ಜನರಿಗೆ ನೀಡಿದೆ. ಇದರ ಜತೆಗೆ ಅಕ್ಷರ ಹಾಗೂ ಆರೋಗ್ಯ ಕ್ಷೇತ್ರದಲ್ಲೂ ಉತ್ತಮ ಯೋಜನೆ ಗಳನ್ನು ತರಬೇಕಾಗಿತ್ತು. ರಾಜ್ಯದಲ್ಲಿ ಅಕ್ಷರ ಮತ್ತು ಆರೋಗ್ಯ ಕ್ಷೇತ್ರದ ಸೇವೆಯು ಕೊರತೆ ಇಲ್ಲದಂತೆ ಜನರಿಗೆ ದೊರೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದೆ. ಆದರೆ, ನನ್ನ ಸಲಹೆ ಜಾರಿಯಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಇತ್ತೀಚೆಗೆ ಪಾಲಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡುತ್ತಿರುವುದು ಸಂತಸದ ವಿಚಾರ. ಆದರೆ, ಹಳ್ಳಿಗಳಿಂದ ನಗರಕ್ಕೆ ವಿದ್ಯಾಭ್ಯಾಸಕ್ಕೆ ಬರುವ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ನಿಲಯಗಳ ಕೊರತೆ ಇದೆ. ಈ ಕೊರತೆ ನೀಗಿಸಲು ನಗರದಲ್ಲಿ 13 ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದರು.
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಸಹಾಯಕ ಪ್ರಾಧ್ಯಾಪಕ ಡಾ.ಭೀಮರಾಜು ಈರೇಗೌಡ ಮಾತನಾಡಿ, ಒಂದು ದೇಶವನ್ನು ಹಾಳು ಮಾಡಲು ಆ ದೇಶದ ಆರ್ಥಿಕತೆ ಹಾಳು ಮಾಡುವ ಅವಶ್ಯಕತೆ ಇಲ್ಲ ಅಥವಾ ಅಣುಬಾಂಬು ಹಾಕುವ ಅವಶ್ಯಕತೆ ಇಲ್ಲ. ಆ ದೇಶದ ಶಿಕ್ಷಣ ವ್ಯವಸ್ಥೆ ಹಾಳು ಮಾಡಿದರೆ ಆ ದೇಶ ಅಧೋಗತಿಯತ್ತ ಮುಖ ಮಾಡುತ್ತದೆ ಎಂಬ ಸತ್ಯವನ್ನು ಎಲ್ಲರು ಅರ್ಥ ಮಾಡಿಕೊಂಡು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಒಬ್ಬ ಬೈಕ್ ಸವಾರ, ಬಸ್ ಚಾಲಕ ಅಥವಾ ವಿಮಾನದ ಪೈಲೆಟ್ ನಿದ್ರೆ ಮಾಡಿದರೆ ಹೆಚ್ಚೆಂದರೆ 200 ರಿಂದ 300 ಜನರು ಸಾಯಬಹುದು. ಆದರೆ, ಶಿಕ್ಷಕ ನಿದ್ರೆ ಮಾಡಿದರೆ ಆ ಶಿಕ್ಷಕ ನಿವೃತ್ತನಾಗುವಷ್ಟರೊಳಗೆ ಅದೆಷ್ಟೋ ವಿದ್ಯಾರ್ಥಿಗಳ ಗೋರಿಗಳು ನಿರ್ಮಾಣ ವಾಗಿರುತ್ತದೆ. ಹಾಗಾಗಿ ಶಿಕ್ಷಕರು ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಶಿಕ್ಷಕರು ಹೊಸ ವಿಚಾರಗಳಿಗೆ ತಮ್ಮನ್ನು ಒಡ್ಡಿಕೊಳ್ಳಬೇಕು. ಈ ತಾಂತ್ರಿಕ ಯುಗದ ಸವಾಲುಗಳಿಗೆ ನಾವು ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಪ್ರಶಸ್ತಿ ಪ್ರದಾನ: ಈ ಸಂದರ್ಭ 33 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದಲ್ಲಿ ಎಸ್.ದೊರೆಸ್ವಾಮಿ, ಚಿಕ್ಕನಾಯ್ಕ, ಕೆ.ಎಸ್. ಮಂಜುಳಾ, ಕೃಷ್ಣನಾಯಕ, ಎಂ. ಜಯಸ್ವಾಮಿ, ನವೀದಾಬಾನು, ಎ.ಡಿ. ಸಂಧ್ಯಾರಾಣಿ, ಎಂ. ಅನಸೂಯ, ಜಯಲಕ್ಷ್ಮೀ, ಪುಷ್ಪಾ, ಎಸ್.ಕೆ. ಜ್ಯೋತಿ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಡಿ.ಎಸ್. ಧನಂಜಯ, ಎಚ್.ಬಿ. ಜ್ಯೋತಿ, ಬಿ.ಟಿ. ಮಂಜುನಾಥ, ಎಂ. ಮಂಜುರಾಜ, ಎಚ್.ಕೆ. ಪ್ರಕಾಶ್, ವೈ.ಇ. ಲೋಹಿತೇಶ, ಎಸ್. ರವಿಕುಮಾರ್, ಮಂಜುಳಾ, ಎ.ಎಂ. ಮಹದೇವಿ, ಎಚ್. ಸುನಂದಾ, ಎಂ. ನಾಗೇಶ್ ಕುಮಾರ್, ಪ್ರೌಢ ಶಾಲಾ ವಿಭಾಗದಲ್ಲಿ ಎಂ. ಕೋಮಲ, ಯು. ಸಂಜಯ್, ಎಚ್.ಪಿ. ಹರೀಶ್, ಭಕ್ತಿಪ್ರಸಾದ್, ಎಂ.ಕೆ. ಸತೀಶ್, ಎಂ.ಅರುಣ್ ಕುಮಾರ್, ಎಲ್.ಆರ್. ಶ್ವೇತಾ, ಪಿ.ಜಿ. ಶ್ರೀಮತಿ ಸಂಕಲ್ಪರಾಜ್, ಜೆ. ಲೋಕೇಶ, ಕೆ.ಕೆ. ಶೋಭಾ ಕುಮಾರಿ, ಬಿ. ಮಹದೇವ ಪ್ರಸಾದ್ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾರಂಭಕ್ಕೂ ಮುನ್ನ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿಯಿಂದ ಕಲಾಮಂದಿರವರೆಗೆ ಸಾರೋಟಿನಲ್ಲಿ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರ ಇಟ್ಟು ಮೆರವಣಿಗೆ ನಡೆಸಲಾಯಿತು. ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಚಾಲನೆ ನೀಡಿದರು.
ವೇದಿಕೆಯಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಕೆ. ವಿವೇಕಾನಂದ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಶಾಲಾ ಶಿಕ್ಷಣ ಇಲಾಖೆಯ ವಿಭಾಗೀಯ ಕಾರ್ಯದರ್ಶಿ ಪಾಂಡುರಂಗ, ಉಪ ನಿರ್ದೇಶಕ ಎಸ್.ಟಿ. ಜವರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ಹಾಗೂ ಇತರರು ಇದ್ದರು