

ಮಂಡ್ಯ: ಅತ್ಯುತ್ತಮ ಶಿಕ್ಷಕರನ್ನು ಸಮಾಜ ಪೂಜಿಸಿ ಗೌರವಿಸುತ್ತದೆ. ನೂರು ವರ್ಷ ಕಳೆದರೂ ಸಹ ಉತ್ತಮ ಶಿಕ್ಷಕರು ಜನರ ಮನಸ್ಸಿನಿಂದ ಕಣ್ಮರೆಯಾಗುವುದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು ತಿಳಿಸಿದರು.
ನಗರದ ಅನಿಕೇತನ ಪ್ರೌಢಶಾಲಾ ಆವರಣದಲ್ಲಿ ಮಂಡ್ಯ ಅಮೃತ ಅಲಯನ್ಸ್ ಸಂಸ್ಥೆ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್, ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ, ಆದರ್ಶ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬದುಕಿಗೆ ಶಿಕ್ಷಣ ಮುಖ್ಯವಾಗುವುದಿಲ್ಲ, ದುಡಿಮೆಯೇ ಮುಖ್ಯ. ಆದರೆ, ಬದುಕಿನಲ್ಲಿ ಜೀವನವನ್ನು ಚೆನ್ನಾಗಿ ಅನುಭವಿಸಬೇಕು ಎಂದರೆ ಶಿಕ್ಷಣ ಅಗತ್ಯ. ಮಾನವೀಯ ಮೌಲ್ಯ, ಮನುಷ್ಯತ್ವ, ಸಮಾನತೆಯ ಮೇಲೆ, ಪ್ರೀತಿ ವಿಶ್ವಾಸದ ಮೇಲೆ, ಧರ್ಮ ಮತ್ತು ಧರ್ಮಗಳ ನಡುವೆ ತಿಕ್ಕಾಟವಿಲ್ಲದೆ ವಿದ್ಯಾರ್ಥಿಗಳ ಭವಿಷ್ಯದ ಜೀವನವನ್ನು ಕಟ್ಟಿಕೊಟುವ ಶಿಕ್ಷಣ ನೀಡಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.
ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ಅಧ್ಯಕ್ಷ ಎಂ.ವಿನಯ್‌ಕುಮಾರ್, ಮಂಡ್ಯ ಅಮೃತ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಲೋಕೇಶ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಾವ್ಯಾ, ನಾಗರಾಜು ಇತರರಿದ್ದರು.
ಇದೇ ವೇಳೆ ಡಾ.ರಾಮಲಿಂಗಯ್ಯ, ಎಂ.ಎಸ್.ಜಯಶ್ರೀ, ಎನ್.ತೇಜೇಶ್ವರಿ, ಕೆಎಸ್.ಸುರೇಶ್‌ಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.