ಶಿಕ್ಷಕರು ಮಕ್ಕಳಿಗೆ ಹೊಸ ಚಿಂತನೆಯ ವಿಷಯ ಬೋಧಿಸಿ: ವಾಗ್ಮಿ ಹಿರೇಮಗಳೂರು ಕಣ್ಣನ್ ಸಲಹೆ

28 krp 01(1)
Published on

ಕೆ.ಆರ್.ಪೇಟೆ: ಶಿಕ್ಷಕ ವೃತ್ತಿಗೆ ಪಾವಿತ್ರ್ಯತೆ ತಂದುಕೊಟ್ಟಿದ್ದೇ ಸರ್ವಪಲ್ಲಿ ರಾಧಾಕೃಷ್ಣನ್. ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ ಅಧ್ಯಾಪಕರಾಗಿದ್ದರು ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯಪಟ್ಟರು.

ಪಟ್ಟಣದ ಅಗ್ರಹಾರಬಾಚಹಳ್ಳಿ ಸಮೀಪದ ಜಯಮ್ಮ ರಾಮಸ್ವಾಮಿ ಸಮುದಾಯ ಭವನದಲ್ಲಿ ಶಾಲಾ ಪ್ರಾಥಮಿಕ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.

ದೇಶದ ಸಂಸ್ಕೃತಿ ರಕ್ಷಣೆಗೆ ಶಿಕ್ಷಕರು ಪಾಠ ಮಾಡಬೇಕು. ಕ್ರಿಯಾಶೀಲತೆಯಿಂದ, ಹೊಸ ಚಿಂತನೆಯಿಂದ ಕೂಡಿದ ವಿಷಯಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಅವರನ್ನು ಎಳೆಯ ವಯಸ್ಸಿನಿಂದಲೇ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಮಾಡಬೇಕು. ಶಿಕ್ಷಕರು ಹೊಸ ವಿಷಯಗಳನ್ನು ನಿತ್ಯ ಅಧ್ಯಯನ ಮಾಡುವ ಮೂಲಕ ಹೊಸ ಪೀಳಿಗೆಯ ಮಕ್ಕಳಿಗೆ ಆಸಕ್ತಿದಾಯಕ ಮಾಹಿತಿಗಳನ್ನು ನೀಡುವ ಮೂಲಕ ಅವರನ್ನು ಸಂತುಷ್ಟಗೊಳಿಸಬೇಕು. ವರ್ಷದ ಹನ್ನೆರಡು ತಿಂಗಳಲ್ಲಿನ ವಿಶೇಷಗಳನ್ನು ಬಳಸಿಕೊಂಡು ಮಕ್ಕಳಿಗೆ ಹಾಡು, ಕಥೆ, ಕವನ ಮುಂತಾದವುಗಳನ್ನು ಸ್ವಾರಸ್ಯಕರವಾಗಿ ಬೋಧಿಸಬಹುದು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಬಾಲ್ಯದಲ್ಲಿ ನನ್ನನ್ನು ತಿದ್ದಿತೀಡಿ ಈ ಸ್ಥಾನಕ್ಕೆ ಬರಲು ಕಾರಣರಾದ ಹಲವಾರು ಶಿಕ್ಷಕರನ್ನು ಇಂದಿಗೂ ನಾನು ಪೂಜ್ಯಭಾವನೆಯಿಂದ ಕಾಣುತ್ತೇನೆ. ಶಿಕ್ಷಕ ವೃತ್ತಿ ಗೌರವ ತರುವಂಥದ್ದು ಎಂದರು.

ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ. ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ಕಲಿಸಿದರೆ ದೇಶಕ್ಕೆ ಶಕ್ತಿ ತುಂಬಿದಂತೆ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಶಿಕ್ಷಕರು, ಅಕಾಲಿಕ ಮರಣ ಹೊಂದಿದ ಶಿಕ್ಷಕರ ಕುಟುಂಬದವರು ಹಾಗೂ ಜಿಲ್ಲಾ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ತಹಸೀಲ್ದಾರ್ ಎಂ.ವಿ.ರೂಪಾ, ಪುರಸಭಾ ಅಧ್ಯಕ್ಷೆ ಮಹಾದೇವಿ, ಪುರಸಭಾ ಮುಖ್ಯಾಧಿಕಾರಿ ಕುಮಾರ್, ತಾಪಂ ಇಒ ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು, ಸಮನ್ವಯಾಧಿಕಾರಿ ಲಿಂಗರಾಜು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ಎಸ್.ಧರ್ಮಪ್ಪ, ಕಾರ್ಯದರ್ಶಿ ಲಕ್ಷ್ಮಣಗೌಡ, ಉಪಾಧ್ಯಕ್ಷ ಪದ್ಮೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ, ಕಾರ್ಯದರ್ಶಿ ಪಿ.ಜೆ.ಕುಮಾರ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ.ಬಸವರಾಜು, ಎಸ್.ಅಂಬರೀಷ್, ಉಪನ್ಯಾಸಕರ ಸಂಘದ ಅಧ್ಯಕ್ಷ ಎಚ್.ಟಿ.ಗಿರೀಶ್, ತಾಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net