ಸರ್ಕಾರಿ ಶಾಲೆ ಉಳಿವಿಗೆ ಕೈಜೋಡಿಸಲಿ: ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್ ಮನವಿ

Teachers day celebration Mandya
Published on

ಮಂಡ್ಯ: ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷ 59 ಸರ್ಕಾರಿ ಶಾಲೆ ಬಾಗಿಲು ಮುಚ್ಚಿರುವುದು ಬೇಸರದ ಸಂಗತಿ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆ ಉಳಿವಿಗೆ ಶಿಕ್ಷಕರ ಜತೆಗೆ ಪಾಲಕರು ಕೈಜೋಡಿಸಬೇಕು ಎಂದು ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್ ಮನವಿ ಮಾಡಿದರು.

ಇಲ್ಲಿನ ಅಶೋಕನಗರದಲ್ಲಿರುವ ಜೈ ಕರ್ನಾಟಕ ಪರಿಷತ್ ಸಭಾಂಗಣದಲ್ಲಿ ರೋಟರಿ ಸಕ್ಕರೆ ನಾಡು ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು. ಸರ್ಕಾರ ಹಲವೆಡೆ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸುತ್ತಿದ್ದು, ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಸೌಲಭ್ಯ ಕಲ್ಪಿಸುತ್ತಿದೆ. ಅದಕ್ಕಾಗಿ ತಮ್ಮ ಗ್ರಾಮದ ಸರ್ಕಾರಿ ಶಾಲೆಗಳ ಉಳಿವಿಗೆ ಮುಂದಾಗಬೇಕು ಎಂದರು.

ಇತ್ತೀಚಿನ ಗುಣಮಟ್ಟದ ಶಿಕ್ಷಣದ ಕೆಟ್ಟ ಪರಿಣಾಮ ಬೀರುತ್ತಿವೆ. ಮೊಬೈಲ್‌ನಲ್ಲಿ ನೋಟ್ಸ್ ಕಳುಹಿಸುವುದು. ಶೇ.20 ಅಂಕಕ್ಕೆ ಪ್ರಾಜೆಕ್ಟ್ ನೀಡಿ 80 ಅಂಕದ ಕಡೆಗೆ ಗಮನ ಕೊಡದಿರುವುದು. ಶಾಲೆಗಳಲ್ಲಿ ಶಿಕ್ಷಕರು ಮೊಬೈಲ್ ಬಳಸುವುದು ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಅಪಾರಸೇವೆ ಸಲ್ಲಿಸಿ ನಿವೃತ್ತಿಯಾದ ನಂತರ ಸಮಾಜ ಸೇವೆಗಳಲ್ಲಿ ತೊಡಗಿರುವ ಕೃಷ್ಣಕುಮಾರ್ ಮತ್ತು ಹುಲಿವಾನ ಜಯರಾಂ ಅವರು ನಿವೃತ್ತಿಯಾದ ನಂತರವೂ ಮಕ್ಕಳಿಗೆ ಶಿಕ್ಷಣ ಕೊಡಬೇಕೆಂದು ಜೈ ಕರ್ನಾಟಕ ಸಂಸ್ಥೆ ಮತ್ತು ರೋಟರಿ ಸಕ್ಕರೆ ನಾಡು ಸಂಸ್ಥೆಯಲ್ಲಿ ಆಯೋಜಿಸುವ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಪಾಠಗಳನ್ನು ಮಾಡುವ ಕಾಳಜಿ ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಕೃಷ್ಣಕುಮಾರ್, ಸರ್ಕಾರಿ ಶಾಲೆಗಳ ಉಳಿವಿಗೆ ಸ್ಥಳೀಯರು ಗಮನಹರಿಸಬೇಕು. ಇಲ್ಲದಿದ್ದರೆ ಕನ್ನಡ ಶಾಲೆಗಳು ಉಳಿಯುವುದು ಕಷ್ಟ. ಸಂಘಸಂಸ್ಥೆಗಳು ಸಹಾಯಧನ ನೀಡಿ ಸರ್ಕಾರದ ಸೌಲಭ್ಯಗಳನ್ನು ಪಡೆದು ಶಾಲೆ ಅಭಿವೃದ್ಧಿ ಪಡಿಸಬೇಕು. 1994ರಲ್ಲಿ ಮದ್ದೂರಿನ ನವಿಲೆ ಗ್ರಾಮಕ್ಕೆ ಹೊಸ ಶಾಲೆಗೆ ಹೋದಾಗ ಅಲ್ಲಿ ಮಳೆ ಆಶ್ರಯದಲ್ಲಿ ಜೀವನ ಸಾಗಿಸುತ್ತಿದ್ದ ರೈತರು ಒಂದು ಲಕ್ಷ ರೂ ದೇಣಿಗೆ ಕೊಟ್ಟಿದ್ದರು. ಜಿಲ್ಲಾ ಪಂಚಾಯಿತಿಗೆ ತಿಳಿಸಿದ ನಂತರ ಆಗಿನ ಯೋಜನಾಧಿಕಾರಿಯಾಗಿದ್ದ ವಸುಂದರಾದೇವಿ ಅವರು ಆ ಶಾಲೆಗೆ 7.5 ಲಕ್ಷ ರೂ ನೀಡಿ ಕಾಯಕಲ್ಪ ನೀಡಿದರು ಎಂದು ತಿಳಿಸಿದರು.

ರೋಟರಿ ಸಕ್ಕರೆ ನಾಡು ಅಧ್ಯಕ್ಷ ನಂದೀಶ್ ಕಾರ್ಯಕ್ರಮ ಉದ್ಘಾಟಿಸಿದರು. ನಿರ್ದೇಶಕರಾದ ಜೆ.ಬಸವರಾಜ್, ಫೈರೋಜ್, ಕೆ.ಸೋಮಣ್ಣ, ಸೋಮಶೇಖರ್, ಶ್ರೀಧರ್, ಗೆಲುವಂತ್ ಎನ್.ಗೌಡ, ಧೀರಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net