

ಭಾಲ್ಕಿ: ದೇಶದ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ ಹೇಳಿದರು.
ಪಟ್ಟಣದ ಗುರುಕೃಪಾ ಕಲ್ಯಾಣ ಮಂಟಪದಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಭವಿಷ್ಯ ರೂಪಿಸುವ ನಿರ್ಮಾತೃಗಳಾಗಿದ್ದಾರೆ. ಅವರ ಕೃಪೆಯಿಂದಲೇ ನಾವೆಲ್ಲರೂ ಇಂದು ಇಂತಹ ವೇದಿಕೆಯ ಮೇಲೆ ನಿಂತಿರುವುದು. ಆದರೆ ಕೆಲವು ದಿನಗಳಲ್ಲಿ ಶಿಕ್ಷಕರ ಮೇಲೆ ಇಲ್ಲಸಲ್ಲದ ಆರೋಪಗಳು ಕೇಳಿ ಬರುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಹೇಳಿದರು.
ದಿವ್ಯ ಸಾನ್ನಿಧ್ಯವಹಿಸಿದ್ದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿದ, ಶಿಕ್ಷಣ ಕ್ಷೇತ್ರ ಪವಿತ್ರವಾದ ಕ್ಷೇತ್ರ, ವಿದ್ಯಾರ್ಥಿಗಳಲ್ಲಿ ಹೃದಯವಂತಿಕೆ ನಿರ್ಮಾಣ ಮಾಡುವ ಕಾರ್ಯ ಶಿಕ್ಷಕರದ್ದಾಗಿದೆ. ದೇಶಕ್ಕೆ ಬೇಕಾಗಿದ್ದು ಹೃದಯವಂತಿಕೆಯ ಮಕ್ಕಳು, ಮಕ್ಕಳಲ್ಲಿ ನೈತಕತೆ, ಆಚಾರ, ವಿಚಾರ ಬೆಳೆಸುವ ಕಾರ್ಯ ಶಿಕ್ಷಕರಿಂದಾಗಬೇಕು. ಶಿಕ್ಷಕರಿಗಿರುವ ಗೌರವ ಮತ್ಯಾರಿಗೂ ಸಿಗುವುದಿಲ್ಲ. ತಂದೆ-ತಾಯಿಗೂ ಗೌರವಿಸದ ರಾಜನೂ ಕೂಡ ಶಿಕ್ಷಕರನ್ನು ಗೌರವಿಸಿದ ಪ್ರಸಂಗಗಳಿವೆ. ಹೀಗಾಗಿ ಶಿಕ್ಷಕರು ಎಲ್ಲರಿಗೂ ವಂದನೀಯರಾಗಿದ್ದಾರೆ ಎಂದು ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷ ಸಂಜೀವಕುಮಾರ ಪಂಡರಗಿರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಅಶೋಕ ರಾಜೋಳೆ ಪ್ರಾಸ್ತಾವಿಕ ಮಾತನಾಡಿದರು. ನ್ಯಾಯವಾದಿ ಉಮಾಕಾಂತ ವಾರದ ಕ್ಲಬ್ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ರೋಟರಿ ಕ್ಲಬ್ ಆಫ್ ಭಾಲ್ಕಿ ವತಿಯಿಂದ ಜಿಲ್ಲೆಯ ಆಯ್ದ ಸುಮಾರು ೧೦೦ ಶಿಕ್ಷಕರಿಗೆ ರಾಷ್ಟ್ರ ನಿರ್ಮಾಪಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಟ್ಟಣದ ಶಿವಾಜಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳು ಎಲ್ಲ ಶಿಕ್ಷಕರನ್ನು ವೈಯಕ್ತಿಕವಾಗಿ ಸನ್ಮಾನಿಸಿ ಗೌರವಿಸಿದರು.
ಸದ್ಗುರು ವಿದ್ಯಾಲಯದ ಸಂಸ್ಥಾಪಕ ಸೋಮನಾಥ ಮುದ್ದಾ, ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್ ಸಂಸ್ಥಾಪಕ ಡಾ.ಅಮಿತ ಅಷ್ಟೂರೆ, ಡಾ.ವಸಂತ ಪವಾರ್, ಹಿರಿಯ ಶಿಕ್ಷಕ ನಾಮದೇವರಾವ ಪವಾರ್, ಬಿಇಒ ಕಚೇರಿಯ ಇಸಿಒ ಸಹದೇವ ಗೌಡಗಾವೆ, ರೋಟರಿ ಕ್ಲಬ್‌ನ ದತ್ತಾತ್ರಿ ಮೆಹಕರ, ಡಾ.ಸಜ್ಜಲ್ ಬಳತೆ, ಡಾ.ನಿತೀನ ಪಾಟೀಲ್, ಡಾ.ಯೋಗೇಶ ಜಾಧವ್, ಡಾ.ಪ್ರಭು ಕೋಟೆ ಬೆಳ್ಳೂರ ಇದ್ದರು. ಅಶೋಕ ರಾಜೋಳೆ ಸ್ವಾಗತಿಸಿದರು. ಉಮಾಕಾಂತ ವಾರದ ನಿರೂಪಣೆ ಮಾಡಿದರು. ಎಸ್.ಬಳತೆ ವಂದಿಸಿದರು.