ಮೈಸೂರು ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ದಿನ ಆಚರಣೆ

TEACHERS DAY HELD AT VIJNANA BAVAN
TEACHERS DAY HELD AT VIJNANA BAVAN
Published on

ಮೈಸೂರು: ಶಿಕ್ಷಕರು ನೀಡುವ ಉತ್ತಮ ಮಾರ್ಗದರ್ಶನ ಪ್ರತಿಯೊಬ್ಬರ ಬದುಕಿನಲ್ಲಿ ಭದ್ರ ಬುನಾದಿ ನಿರ್ಮಾಣ ಮಾಡುತ್ತದೆ ಎಂದು ದೆಹಲಿಯ ನ್ಯಾಷನಲ್ ಕ್ಯಾಪಿಟಲ್ ಟೆರಿಟರಿಯ ಲೆಫ್ಟಿನೆಂಟ್ ಗವರ್ನರ್ ಅವರ ಸಲಹೆಗಾರ ಡಾ.ಸುದರ್ಶನ್ ರಾಮರಾಜು ಹೇಳಿದರು.

ಮೈಸೂರು ವಿಶ್ವವಿದ್ಯಾಲಯ ವತಿಯಿಂದ ಗುರುವಾರ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಭವಿಷ್ಯಕ್ಕೆ ಸುಂದರ ಅಡಿಪಾಯ ಹಾಕಿಕೊಡುವ ಶಿಕ್ಷಕರಿಗೆ ನಾವು ಸದಾ ಋಣಿಯಾಗಿರಬೇಕು ಎಂದು ಹೇಳಿದರು.

ಸಮಾಜಕ್ಕೆ ಜ್ಞಾನದ ಬೆಳಕು ನೀಡುವ ಶಿಕ್ಷಕರಿಗೆ ಎಷ್ಟು ಗೌರವ ಸಲ್ಲಿಸಿದರೂ ಸಾಲದು. ಸೈನಿಕರು, ಕೃಷಿಕರು ಮತ್ತು ಶಿಕ್ಷಕರ ಸೇವೆಯಿ ಂದ ದೇಶ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಭವಿಷ್ಯದ ನಾಯಕರನ್ನು ನಿರ್ಮಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ ಎಂದರು.

ಸಮಾಜದ ಸರ್ವತೋಮುಖ ಪ್ರಗತಿಗೆ ಶಿಕ್ಷಣ ಅನಿವಾರ್ಯವಾಗಿದ್ದು, ಶಿಕ್ಷಕ ಸಮುದಾಯ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಆದರ್ಶ ವಿದ್ಯಾರ್ಥಿಗಳನ್ನು ರೂಪಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ವಿ.ಆರ್.ಶೈಲಜಾ ಮಾತನಾಡಿ, ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು. ಅಂದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ಗುರು ಎಂಬ ಶಕ್ತಿಯಿಂದ ಮಾತ್ರ ಜಗತ್ತು ನಡೆಯುತ್ತಿದೆ. ಬೋಧನಾ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಗಳಲ್ಲಿ ಒಂದು ಎಂಬುದನ್ನು ಪರಿಗಣಿಸಿರುವ ದೇಶ ನಮ್ಮದು. ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದರ ಜತೆಗೆ ಸರಿ ತಪ್ಪುಗಳನ್ನು ತಿದ್ದುವ, ಅವರಲ್ಲಿನ ಆಸಕ್ತಿಗಳನ್ನು ವೃದ್ಧಿಸುವ ಮತ್ತು ಅವರ ಬದುಕಿಗೆ ಗುರಿ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದರು. ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net