ಕೊಡಗು ವಿವಿಯಲ್ಲಿ ಶಿಕ್ಷಕರ ದಿನಾಚರಣೆ

Teacher's Day celebration at Kodagu University
Published on

ಮಡಿಕೇರಿ:

ಶಿಕ್ಷಕರು ಎಂಬುದು ಒಂದು ಅದ್ಭುತ ಶಕ್ತಿ. ಅತ್ಯಂತ ಶ್ರೇಷ್ಠ ವೃತ್ತಿಯಾಗಿರುವ ಶಿಕ್ಷಕ ವೃತ್ತಿಯಲ್ಲಿ ತ್ಯಾಗ ಮತ್ತು ಸಹಕಾರ ಬಹು ಮುಖ್ಯವಾದುದು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಹೇಳಿದರು. ಚಿಕ್ಕಅಳುವಾರದ ಕೊಡಗು ವಿಶ್ವವಿದ್ಯಾಲಯ ಜ್ಞಾನ ಕಾವೇರಿ ಕ್ಯಾಂಪಸ್‌ನÀ ಹಾರಂಗಿ ಸೆಮಿನಾರ್‌ಹಾಲ್ ನಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅತ್ಯಂತ ಶ್ರೇಷ್ಠವಾದ ಶಿಕ್ಷಕರ ವೃತ್ತಿಯಲ್ಲಿ ನ್ಯಾಯ ದೊರಕಿಸುವ ಪ್ರಯತ್ನ ಮಾಡಬೇಕು. ಆದರ್ಶ ವ್ಯಕ್ತಿಯಾಗಿ ಮೊದಲು ಶಿಕ್ಷಕ ರೂಪಿತಗೊಂಡು, ತನ್ನ ವೃತ್ತಿ ಬದುಕಿನಲ್ಲಿ ನಡೆ ನುಡಿಗಳನ್ನೊಂದಾಗಿಸಿಕೊAಡು ಸೇವೆ ಸಲ್ಲಿಸುವ ಮಾನಸಿಕ ಸ್ಥಿರತೆ ಹೊಂದಿರಬೇಕು. ನಾಡು ನೀಡಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ನಮ್ಮ ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ಅರಿವು ಇರಬೇಕು. ಸಮಾಜದ ಮುಂದಿನ ಪೀಳಿಗೆಯ ಆದರ್ಶಕ್ಕೆ ಅಡಿಪಾಯ ಒದಗಿಸುವಂಥ ಸುಶಿಕ್ಷಿತ ಮತ್ತು ಸುಸಂಸ್ಕೃತ ಜನರನ್ನು ರೂಪುಗೊಳಿಸಬೇಕು ಎಂದರು.

ಕೊಡಗು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ. ಸುರೇಶ್ ಎಂ. ಮಾತನಾಡಿ, ಆದರ್ಶ ಶಿಕ್ಷಕ ಈ ಸಮಾಜದ ಆಸ್ತಿ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಶಿಕ್ಷಕರು ಮುನ್ನಡೆಯಬೇಕು. ಸಮಾಜವನ್ನು ತಿದ್ದುವ ಬಹು ದೊಡ್ಡ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮದ್ ಸೇರಿದಂತೆ ವಿವಿಧ ವಿಭಾಗದ ಉಪನ್ಯಾಸಕರು, ಆಡಳಿತ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net