

ಮಂಡ್ಯ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲಿ ಬದಲಾಗದೆ ಯಥಾವತ್ತಾಗಿ ಮುಂದುವರಿಯಲಿ ಎಂದು ಬದುಕು ಬೆಳಕು ಸೇವಾ ಸಮಿತಿ ಅಧ್ಯಕ್ಷ ಎಚ್.ಆರ್.ಅರವಿಂದ್ ಒತ್ತಾಯಿಸಿದರು.
ತಾಲೂಕಿನ ಜೋಡಿ ಹೊಡಾಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬದುಕು ಬೆಳಕು ಸೇವಾ ಸಮಿತಿ, ನಿವೃತ್ತ ಶಿಕ್ಷಕ ಕೆ.ಮಾಯಿಗಶೆಟ್ಟಿ ಸೇವಾ ಸಮಿತಿ, ಮಾತೃಶ್ರೀ ಎಜುಕೇಷನ್ ಮತ್ತು ಸೋಶಿಯಲ್ ಟ್ರಸ್ಟ್ ಕೀಲಾರ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕರಿಗೆ ಅಭಿನಂದನೆ ಮತ್ತು ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬದಲಾಯಿಸುವುದು ಬೇಡ. ಇದರಿಂದಾಗಿ ಕೌಶಲಾಧಾರಿತ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಾರೆ. ಮಾತ್ರವಲ್ಲದೆ ವಿಜ್ಞಾನ, ತಂತ್ರಜ್ಞಾನ, ವೈಜ್ಞಾನಿಕ, ಜಾನಪದ ಕಲೆ, ಸಂಸ್ಕೃತಿಯ ಸೊಗಡು, ಕ್ರೀಡೆಗೆ ನೀಡಿದ ಮಹತ್ವ ಎಲ್ಲವೂ ನಾಶವಾಗುತ್ತದೆ ಎಂದು ಎಚ್ಚರಿಸಿದರು.
ನೂತನ ನೀತಿಯಲ್ಲಿ ಸ್ಥಳೀಯ ಜಾನಪದ ಕಲೆ, ಸಾಂಸ್ಕೃತಿಕ ವಿಕಾಸ ವಿದ್ಯಾರ್ಥಿಗಳಿಗೆ ಅಗತ್ಯವಿದೆ. ಕೌಶಲಜ್ಞಾನ ಹೆಚ್ಚಳದಿಂದ ಉದ್ಯೋಗ, ಉದ್ಯಮ ಹೆಚ್ಚುತ್ತವೆ. ವಿಜ್ಞಾನ, ತಂತ್ರಜ್ಞಾನದಿಂದ ವೈಜ್ಞಾನಿಕ ಮನೋಭಾವ ಬೆಳೆದು ವಿಜ್ಞಾನಿಗಳು, ತಂತ್ರಜ್ಞಾನಿ ಸಂಖ್ಯೆ ವೃದ್ಧಿಸಲಿದೆ. ಇದರಿಂದ ರಾಷ್ಟ್ರದ ಅಭಿವೃದ್ದಿಗೆ ಸಹಕಾರವಾಗುತ್ತದೆ ಎಂಬುದನ್ನು ರಾಜ್ಯಸರ್ಕಾರ ಮರೆಯಬಾರದು ಎಂದರು.
ಮುಖ್ಯಶಿಕ್ಷಕ ಲಿಂಗರಾಜು ಮಾತನಾಡಿ, ಸರ್ಕಾರಿ ಶಾಲೆ ಎಂದರೆ ಕೀಳರಿಮೆ ಬೇಡ. ಕೆಎಎಸ್, ಐಎಎಸ್ ಉತ್ತೀರ್ಣರಾಗಿರುವವರ ಪೈಕಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹೆಚ್ಚಿದ್ದಾರೆ ಎಂದರು.
ಮಾತೃಶ್ರೀ ಎಜುಕೇಷನ್ ಮತ್ತು ಸೋಶಿಯಲ್ ಟ್ರಸ್ಟ್ ಅಧ್ಯಕ್ಷ ಕೆ.ಪಿ.ವೀರಪ್ಪ, ಅಮೃತ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎಂ.ಲೋಕೇಶ್, ಶಿಕ್ಷಕರಾದ ಕೆ.ಟಿ.ನಾರಾಯಣ್‌ರಾಜು ಅರಸು, ಡಿ.ಎಸ್.ಕೃಷ್ಣೇಗೌಡ, ನಾಗರಾಜು ಕೀಲಾರ, ಕೆ.ಆರ್.ಶಶಿಧರ ಈಚಗೆರೆ, ಎನ್.ಕೆ.ಪವಿತ್ರಾ, ಆರ್.ಚಂದ್ರಮತಿ, ಬಿ.ಸಿ.ಶಿಲ್ಪಾ, ಚೈತ್ರಾ, ಶೃತಿ, ಬಿ.ಕೆ.ರಾಮಯ್ಯ ಗೌಡಗೆರೆ ಇತರರಿದ್ದರು. ಇದೇ ವೇಳೆ ಶಿಕ್ಷಕರನ್ನು ಸನ್ಮಾನಿಸಲಾಯಿತು.