

ಮಹಾಲಿಂಗಪುರ: ಸ್ಥಳೀಯ ನವಚೇತನ ಶಿಕ್ಷಣ ಸಂಸ್ಥೆಯ ಜೆಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ ದಿನಾಚರಣೆ ಮಂಗಳವಾರ ಅತ್ಯಂತ ವಿಶೇಷವಾಗಿ ಆಚರಿಸಲಾಯಿತು. ಮಕ್ಕಳೇ ಶಿಕ್ಷಕರಾಗಿ, ಶಿಕ್ಷಕರೇ ಮಕ್ಕಳಾಗಿ ಹಲವಾರು ಆಟ, ಪಾಠಗಳಲ್ಲಿ ತೊಡಗಿ ಗಮನ ಸೆಳೆದರು.
ಬೆಳಗ್ಗೆಯಿಂದಲೇ ಹಲವು ವಿದ್ಯಾರ್ಥಿಗಳು ಶಿಕ್ಷಕಿಯರಂತೆ ಸೀರೆ ಉಟ್ಟು ಮತ್ತು ಶಿಕ್ಷಕರಂತೆ ಡ್ರೆಸ್ ಧರಿಸಿ ತರಗತಿಗಳಲ್ಲಿ ಪಾಠ ಬೋಧಿಸಿದರು. ಅದೇ ರೀತಿ ಶಿಕ್ಷಕರನ್ನೇ ಮಕ್ಕಳಂತೆ ಗುಂಪುಗಳಾಗಿ ವಿಂಗಡಿಸಿ ಕ್ವಿಜ್, ಮ್ಯೂಸಿಕಲ್ ಚೇರ್, ಲೆಮನ್ ಸ್ಪೂನ್ ಮುಂತಾದ ಸ್ಪರ್ಧೆ ಏರ್ಪಡಿಸಿ ಮಕ್ಕಳೇ ನಿರ್ಣಾಯಕರಾಗಿ ವಿಜೇತ ಶಿಕ್ಷಕರಿಗೆ ಬಹುಮಾನ ವಿತರಿಸಿದರು.
ಚಂದ್ರಯಾನ ಮೂರನ್ನು ಯಶಸ್ವಿಗೊಳಿಸಿ ಸೂರ್ಯನತ್ತ ಅಡಿಯಿಟ್ಟಿರುವ ಇಸ್ರೋ ವಿಜ್ಞಾನಿಗಳಿಗೆ ಮತ್ತು ಶಿಕ್ಷಕರಿಗೆ ವಿದ್ಯಾರ್ಥಿಗಳು ವಿಶೇಷ ಗೌರವ ಸಲ್ಲಿಸಿದರು.
ಸಂಸ್ಥೆ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಮಾತನಾಡಿ, ದೇಶದ ಅಭಿವೃದ್ಧಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಗುಣಮಟ್ಟದ ಆರೋಗ್ಯ ಅನಿವಾರ್ಯ. ಡಾ. ರಾಧಾಕೃಷ್ಣನ್ ಅವರಂತ ಶಿಕ್ಷಕರಿಂದ ದೇಶವೇ ರಾಮರಾಜ್ಯವಾಗಬಲ್ಲದು. ಉತ್ತಮ ಶಿಕ್ಷಕರಿಂದ ಮಾತ್ರ ಉತ್ತಮ ಸಮಾಜ ಮತ್ತು ಸದೃಢ ದೇಶ ನಿರ್ಮಾಣವಾಗಲು ಸಾಧ್ಯ ಎಂದರು.
ಪತ್ರಕರ್ತ ಮಹೇಶ ಮನ್ನಯ್ಯನವರಮಠ ಮಾತನಾಡಿ, ಸಮಾಜದ ಉತ್ಕೃಷ್ಟ ಸ್ಥಾನದಲ್ಲಿರುವ ಶಿಕ್ಷಕರು ಮಕ್ಕಳಿಗೆ ಸನ್ಮಾರ್ಗ ನೀಡಿ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.
ಸಂಸ್ಥೆ ಅಧ್ಯಕ್ಷ ಶಾಂತಿಲಾಲ ಪಟೇಲ, ನಿರ್ದೇಶಕರಾದ ರಮೇಶ ಮುಳವಾಡ, ಈಶ್ವರ ಮುರಗೋಡ, ಮುಖ್ಯೋಪಾಧ್ಯಾಯ ಎಸ್.ಜಿ. ಕೌಜಲಗಿ, ಪತ್ರಕರ್ತ ನಾರನಗೌಡ ಉತ್ತಂಗಿ ಇತರರಿದ್ದರು.