

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಎಸ್ಸೆಸ್ಸೆಲ್ಸಿ-ಪಿಯುಸಿಯಲ್ಲಿ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ಏರಿಸಿ: ಸಚಿವ ಮುನಿಯಪ್ಪ
ರಾಜ್ಯದಲ್ಲಿ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳು ಪ್ರಥಮ ಸ್ಥಾನದಲ್ಲಿರುತ್ತವೆ. ಶಿಕ್ಷಣದಲ್ಲಿ ಮುಂದುವರೆದ ಜಿಲ್ಲೆಗಳಾಗಿವೆ. ಆ ಸಾಲಿಗೆ ಗ್ರಾಮಾಂತರ ಜಿಲ್ಲೆಯು ಸೇರಬೇಕು. ನಮ್ಮ ಜಿಲ್ಲೆಯೂ ಶಿಕ್ಷಣದಲ್ಲಿ ಮುಂದುವರೆಯಬೇಕು ಎಂದು ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ದೇವನಹಳ್ಳಿ ಟೌನ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆಯಲ್ಲಿ ಮಾತನಾಡಿದರು. ಮುಂಬರುವ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತರಲು ಶಿಕ್ಷಕರು ಹೆಚ್ಚು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು. ಶಿಕ್ಷಣಕ್ಕೆ ಸರ್ಕಾರದಿಂದ ಬೇಕಾದ ನೆರವು ನೀಡಲು ಸಿದ್ದರಿದ್ದೇವೆ. ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಕೊಡುಗೆಗಳು ಅಜರಾಮರ: ಎಲ್ಲರೂ ಒಂದಲ್ಲ ಒಂದು ದಿನ ನಿವೃತ್ತಿ ಹೊಂದಲೇಬೇಕು ಆದರೆ ಅವರು ನೀಡಿರುವ ಕೊಡುಗೆಗಳು ಅಜರಾಮರವಾಗಿರಬೇಕು ಎಂದ ಸಚಿವರು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ ಹಲವರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಗ್ರಗಣ್ಯ ದೇಶಗಳ ಜತೆಗೆ ನಮ್ಮ ದೇಶ ಬೆಳೆಯಬೇಕು. ಸಿಇಟಿ, ನೀಟ್‌ನಂತಹ ಪರಿಕ್ಷೆಗಳಲ್ಲಿ ಸರ್ಕಾರಿ ಶಾಲೆ ಮಕ್ಕಳು ಸಾಧನೆ ಮಾಡಬೇಕು ಈ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.
ಮಹಾನ್ ವ್ಯಕ್ತಿಗಳ ಹೋರಾಟ: ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಡಿ ರಂಗಪ್ಪ ಮಾತನಾಡಿ, ಭಾರತ ಅತ್ಯಂತ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹೊಂದಿರುವ ದೇಶ. ಅಂದಿನ ಕಾಲದಲ್ಲಿ ಅಕ್ಷರ ಸಂಸ್ಕೃತಿ ಎಲ್ಲರಿಗೂ ಸಿಗುತ್ತಿರಲಿಲ್ಲ, ಅಂತಹ ಸಮಯದಲ್ಲಿದ್ದ ಅನೇಕ ಸಂಪ್ರದಾಯಗಳು ಹಾಗೂ ಮೂಡನಂಬಿಕೆಗಳನ್ನು ಹೋಗಲಾಡಿಸಲು ಸಮಾಜದಲ್ಲಿನ ಮಹಾನ್ ವ್ಯಕ್ತಿಗಳಾದ ಬುದ್ಧ, ಬಸವಣ್ಣ, ಜ್ಯೋತಿಭಾ ಫುಲೆ, ಸಾವಿತ್ರಿಬಾಯಿ ಫುಲೆ, ಡಾ.ಬಿ.ಆರ್.ಅಂಬೇಡ್ಕರ್‌ರವರು ಹೋರಾಡಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದರು ಎಂದು ಸ್ಮರಿಸಿದರು. ದೇಶವು ಮುನ್ನೆಲೆಗೆ ಬರಬೇಕೆಂದರೆ ಮೊದಲು ಶಿಕ್ಷಣ ಕ್ಷೇತ್ರದಲ್ಲಿ ಅಚ್ಚುಕಟ್ಟಾದ ಕೆಲಸ ಮಾಡಬೇಕು. ಆದ್ದರಿಂದ ಕಡ್ಡಾಯ ಶಿಕ್ಷಣ ನೀಡಬೇಕು ಎಂಬುದನ್ನು ಶಾಸನ ಬದ್ದವಾಗಿ ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನದಲ್ಲಿ 45 ನೇ ವಿಧಿಯಲ್ಲಿ ಪರಿಚಯಿಸಿದರು. ಈ ರೀತಿ ಕಾನೂನುಗಳನ್ನು ಜಾರಿಗೆ ತಂದು ಮಹಿಳೆಯರಿಗೆ, ದಲಿತರಿಗೆ, ಕಾರ್ಮಿಕರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಶಿಕ್ಷಣ ಸಿಕ್ಕಂತಾಯಿತು ಎಂದರು. ಕಳೆದ ಮುರ‌್ನಾಲ್ಕು ವರ್ಷಗಳಿಂದ ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಕುಸಿಯುತ್ತಿದೆ. ಎಷ್ಟೋ ಸರ್ಕಾರಿ ಶಾಲೆಯಲ್ಲಿ ಬೆರಳೆಣಿಕೆಯಷ್ಟು ಮಕ್ಕಳಿದ್ದರೆ, ಇನ್ನೂ ಕೆಲವು ಶಾಲೆಗಳಲ್ಲಿ ಒಂದನೇ ತರಗತಿಗೆ ಒಂದು ಮಗು ಕೂಡ ಇಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ರಂಗಪ್ಪ, ಮುಖ್ಯವಾಗಿ ಮಕ್ಕಳ ಕಲಿಯುವ ಕ್ರಮವನ್ನು ಅಧ್ಯಯನ ಮಾಡಿ ಬದಲಾಯಿಸಬೇಕು. ಈ ಕಾರ್ಯವನ್ನು ಕೇವಲ ಶಿಕ್ಷಕರು ಮಾತ್ರ ಮಾಡಬೇಕು. ನೀವು ಶಾಲೆಗೆ ಬರುವ ಮಕ್ಕಳನ್ನು ನಿಮ್ಮ ಮಕ್ಕಳು ಎಂಬ ಭಾವನೆಯಿಂದ ಶಿಕ್ಷಣವನ್ನು ಧಾರೆಯರಿಯಬೇಕು ಎಂದರು.
ಪ್ರಶಸ್ತಿ ವಿತರಣೆ:
ಜಿಲ್ಲೆಯ 15 ಶಿಕ್ಷಕರಿಗೆ ಅತ್ಯುತ್ತಮ ಪ್ರಶಸ್ತಿ, ಒಬ್ಬರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.