ಮೈಸೂರಿನಲ್ಲಿ ಶಿಕ್ಷಕರ ದಿನಾಚರಣೆ; 33 ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

teachers day
Published on

ಮೈಸೂರು: ಶಿಕ್ಷಣದ ಮೂಲಕ ಎಲ್ಲವನ್ನು ಸಾಧಿಸಲು ಸಾಧ್ಯ, ಆದ್ದರಿಂದಲೇ ಇಂದು ನಾವು ಚಂದ್ರನನ್ನು ಸಹ ಮುಟ್ಟಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಗರದ ಕಲಾಮಂದಿರದಲ್ಲಿ ಮಂಗಳವಾರ ಹಮ್ಮಿಕೊ ಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರೃ ಸಂದರ್ಭದಲ್ಲಿ ದೇಶದಲ್ಲಿ ಸಾಕ್ಷರತೆ ಪಡೆದವರ ಪ್ರಮಾಣ ಶೇ.10ಕ್ಕಿಂತ ಕಡಿಮೆ ಇತ್ತು. ಸನಾತನ ವಾದಗಳು ಶೋಷಿತ ಸಮುದಾಯವನ್ನು ಅಕ್ಷರ ಸಂಸ್ಕೃತಿಯಿಂದ ದೂರ ಇರಿಸಿದ ಪರಿಣಾಮ ದೇಶದ ಸಾಕ್ಷರತೆ ಪ್ರಮಾಣ ಸ್ವಾತಂತ್ರೃ ಪೂರ್ವದಲ್ಲಿ ಹೆಚ್ಚು ಇರಲಿಲ್ಲ. ಬ್ರಿಟಿಷರಿಂದ ದೇಶದಲ್ಲಿ ಸಾಕಷ್ಟು ಅನಾಹುತಗಳು ಆಯಿತು. ಆದರೆ, ಬ್ರಿಟಿಷರು ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸಿದ ಹಿನ್ನೆಲೆಯಲ್ಲಿ ಎಲ್ಲರಿಗೂ ಶಿಕ್ಷಣ ದೊರೆಯುವಂತಾಯಿತು. ಬ್ರಿಟಿಷರು ಬಾರದೆ ಇದ್ದಿದ್ದರೆ ಅಂಬೇಡ್ಕರ್ ಉನ್ನತ ಶಿಕ್ಷಣ ಪಡೆಯುವ ವಾತಾವ ರಣ ಇರುತ್ತಿರಲಿಲ್ಲ. ಅಂಬೇಡ್ಕರ್ ಉನ್ನತ ಶಿಕ್ಷಣ ಪಡೆಯದೆ ಇದ್ದಿದ್ದರೆ ನಮಗೆ ಅತ್ಯುತ್ತಮ ಸಂವಿಧಾನ ದೊರೆಯುತ್ತಿರಲಿಲ್ಲ ಎಂದು ಹೇಳಿದರು.

ದೇಶದಲ್ಲಿ ಪ್ರಸ್ತುತ ಶೇ.75ರಷ್ಟು ಸಾಕ್ಷರತೆ ಇದ್ದು, ಇದನ್ನು ಶೇ.100ಕ್ಕೆ ಏರಿಸಬೇಕು. ಎಲ್ಲರಿಗೂ ಶಿಕ್ಷಣ ದೊರೆಯಬೇಕು. ಸ್ವಾತಂತ್ರೃ ಪೂರ್ವದಲ್ಲಿ ಎಲ್ಲರಿಗೂ ಶಿಕ್ಷಣ ದೊರೆತ್ತಿದ್ದರೆ ಇಂದು ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಇರಬಹುದಿತ್ತು ಎಂದು ಅಭಿಪ್ರಾಯಪಟ್ಟರು.

ಕೇವಲ ಶಾಲೆಗಳಲ್ಲಿ ಪಾಠ ಮಾಡಿದವರು ಮಾತ್ರ ಶಿಕ್ಷಕರಲ್ಲ ನಮಗೆ ಜೀವನದ ಪಾಠ ಹೇಳಿಕೊಟ್ಟವರೂ ಸಹ ಶಿಕ್ಷಕರೇ. ಶಿಕ್ಷಣದ ಮೂಲಕ ಮಾನವೀಯ ಮೌಲ್ಯಗಳನ್ನು ತಿಳಿಸುತ್ತಾ, ಮಗುವನ್ನು ಸಮಾಜದ ಜವಾಬ್ದಾರಿಯುತ ಪ್ರಜೆಯಾಗಿ ನಿರ್ಮಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಶಿಕ್ಷಣ ಕೇವಲ ಪಾಠಕ್ಕೆ ಮಾತ್ರ ಸೀಮಿತವಾಗಿರದೆ ರಾಷ್ಟ್ರದ ಪುನರ್ ನಿರ್ಮಾಣಕ್ಕೆ ಪೂರಕವಾಗುವಂತಿರಬೇಕು. ದೇಶದ 140 ಕೋಟಿ ಜನರ ಯೋಗ ಕ್ಷೇಮವು ಶಿಕ್ಷಣವನ್ನು ಅವಲಂಬಿಸಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸಿದೆ. ನಮ್ಮ ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 19,000 ಶಿಕ್ಷಕರಿದ್ದು, 4,20,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 33 ಶಿಕ್ಷಕರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದು, ಇಬ್ಬರು ಶಿಕ್ಷಕರು ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆ ಮತ್ತಷ್ಟು ಸಾಧನೆ ಮಾಡಲಿ ಎಂದು ಆಶಿಸಿದರು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಗೊಂಡ 33 ಶಿಕ್ಷಕರು, ನಿವೃತ್ತ ಶಿಕ್ಷಕರು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಶಾಸಕರಾದ ತನ್ವೀರ್ ಸೇಠ್, ಕೆ. ಹರೀಶ್ ಗೌಡ, ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಸಿ.ಎನ್.ಮಂಜೇಗೌಡ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ. ರೂಪಾ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ, ವರುಣ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎನ್.ಎಂ. ಶಿವಪ್ರಕಾಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ. ಗೋವಿಂದರಾಜು, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಕೆ. ಪಾಂಡು, ವಿವಿಧ ಶಿಕ್ಷಕರ ಸಂಘಗಳ ಪದಾಧಿಕಾರಿಗಳಾದ ಕೆ.ಬಿ. ಸೋಮೇಗೌಡ, ಸಿ.ಬಿ. ಅರುಣ ಕುಮಾರ, ಪಿ. ಮಹದೇವಯ್ಯ, ಜಿ.ನಾಗೇಶ್, ದುಂಡಯ್ಯ, ರಾಜೇಂದ್ರ, ಟಿ.ಸಿ. ಕೃಷ್ಣಮೂರ್ತಿ, ಮುತ್ತಣ್ಣ ನಿಂ. ಬೀಡನಾಳ, ಹರ್ಷ, ಟಿ.ಎಸ್. ಗೋಪಿನಾಥ್, ಎನ್. ನಾಗರಾಜು, ಟಿ.ಜೆ. ಆನಂದ, ಸೋಮಶೇಖರ್, ಗಂಗೇಶ ಹಾಗೂ ಇತರರು ಇದ್ದರು.

ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಎಸ್. ಶಿಲ್ಪಾ, ಕೆ.ಆರ್. ಮಂಜುನಾಥ್, ಸೋಮಶೇಖರ, ಕೆ.ಪಿ. ಭಾರತಿ, ಆರ್. ನಾಗೇಂದ್ರ, ಟಿ.ಎನ್. ಸುಬ್ರಹ್ಮಣ್ಯ, ರಂಗಸ್ವಾಮಿಶೆಟ್ಟಿ, ಎಂ. ಕೆಂಪರಾಮೇಗೌಡ, ಟಿ.ಆರ್. ಶಂಕರಪ್ಪ, ನೂರ್ ಸಲ್ಮಾ, ಗ್ಲಾಡಿನ್ ಡಿ’ಸಿಲ್ವಾ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಡಾ.ಕೆ.ಮಾಧುಪ್ರಸಾದ್, ಆರ್.ರೇಖಾ, ಕುಮಾರೇಗೌಡ, ಸುಬ್ಬೇಗೌಡ, ಭಾಗ್ಯಮ್ಮ, ಎಚ್.ಎಸ್. ನಳಿನಿ, ಎಂ.ಸಿ.ಮಹದೇವಪ್ಪ, ಬಂಗಾರಯ್ಯ, ಎಸ್.ಜೆ.ರತ್ನಮ್ಮ, ಸಗಾಯ ಮೇರಿ, ಕೆ.ಎನ್.ಹರ್ಷ, ಪ್ರೌಢಶಾಲಾ ವಿಭಾಗದಲ್ಲಿ ವಾಣಿಶ್ರೀ, ಎಂ.ಸತೀಶ್, ಎನ್.ಸುಮ, ಎಲ್.ಮಂಜುನಾಥ್, ಎಂ.ಎನ್. ಪವಿತ್ರಾ, ನಾಗಶೆಟ್ಟಿ, ರಮೇಶ್, ಎಚ್.ಬಿ. ಚಂದ್ರೇಗೌಡ, ಎಸ್.ವೈದ್ಯನಾಥನ್, ಪಿ.ನಿಂಗರಾಜಮ್ಮ, ಎಂ.ಸಿ.ದೇವರಾಜು ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net