

ಜಗಳೂರು: ಕನ್ನಡ ಸರ್ಕಾರಿ ಶಾಲೆಗಳು ಕೇವಲ ಬಡ ಮಕ್ಕಳಿಗೆ ಸೀಮಿತವಾಗಿದೆ. ಆದರೆ, ಎಲ್ಲಿವರೆಗೆ ರಾಜಕಾರಣಿ, ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸುವುದಿಲ್ಲವೋ ಅಲ್ಲಿವರೆಗೆ ಸರ್ಕಾರಿ ಶಾಲೆಗಳ ಉದ್ಧಾರ ಅಸಾಧ್ಯ ಎಂದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಲೇಖಕ ಕುಂ. ವೀರಭದ್ರಪ್ಪ ಹೇಳಿದರು.
ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಡಾ.ಸರ್ವಪಲ್ಲಿ ರಾಧಾಕೃಷ್ಣ್ಣನ್ ಅವರ 135ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳ ವ್ಯಾಮೋಹದಿಂದ ಎಲ್ಲರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಂದ ದೂರ ಮಾಡುತ್ತಿದ್ದಾರೆ. ಇದರಲ್ಲಿ ಶಿಕ್ಷಕರ ಮಕ್ಕಳು ಕೂಡ ಹೆಚ್ಚಾಗಿರುವುದು ಬೇಸರ ಸಂಗತಿ ಎಂದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಕ್ಕಳಿಲ್ಲದ ಶಾಲೆ ಮುಚ್ಚುವ ಅಭಿಪ್ರಾಯ ವ್ಯಕ್ತಪಡಿಸಿರುವುದು ಅಪಾಯಕಾರಿ ಕ್ರಮ. ಮಕ್ಕಳ ಕೊರತೆ ಇರುವ ಸರ್ಕಾರಿ ಶಾಲೆ ಮುಚ್ಚುವ ಕ್ರಮ ಒಂದು ರೀತಿ ಹೆಂಡತಿ ರೋಗಿ ಎಂದು ಮತ್ತೊಂದು ಮದುವೆಯಾದಂತೆ. ಸರ್ಕಾರಿ ಶಾಲೆಗಳು ಸೊರಗುತ್ತಿದ್ದರೆ ಅವುಗಳಿಗೆ ಮೂಲಸೌಕರ್ಯ ಕಲ್ಪಿಸುವ ಮೂಲಕ ಅಭಿವೃದ್ಧಿ ಪಡಿಸಬೇಕೇ ವಿನಾ ಮತ್ತೊಂದು ಶಾಲೆಗೆ ವಿಲೀನಗೊಳಿಸುವ ಮೂಲಕ ಸೊರಗಿರುವ ಶಾಲೆ ಮುಚ್ಚಿದರೆ ಅದು ದ್ರೋಹದ ಕೆಲಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಮಾತನಾಡಿ, ನಾನು ಶಿಕ್ಷಕರ ಪಾದಗಳಿಗೆ ಚಪ್ಪಲಿಯಾಗಿ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ. ಈ ಮಟ್ಟಕ್ಕೆ ಬೆಳೆಯಲು ಕಾರಣ ನನ್ನ ಗುರುಗಳು ಎಂದು ಸ್ಮರಿಸಿದರು.
ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಗಮನಹರಿಸಲಾಗುವುದು, ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಎಂದಾದರೂ ಫಲ ಕೊಟ್ಟೆ ಕೊಡುತ್ತದೆ ಎಂದು ದೇವನೂರು ಮಹಾದೇವ ಹೇಳಿದ್ದಾರೆ. ಶಿಕ್ಷಕರಿಗೆ ಏನೇ ಸಮಸ್ಯೆಗಳಿದ್ದರೂ ನನ್ನ ಜತೆ ಮುಕ್ತವಾಗಿ ಚರ್ಚಿಸಿ ಎಂದರು.
ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ. ಪಾಲಯ್ಯ, ತಹಸೀಲ್ದಾರ್ ಅರುಣ್ ಕಾರಗಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎನ್. ರಾಘವೇಂದ್ರರಾವ್, ನೌಕರರ ಸಂಘದ ಅಧ್ಯಕ್ಷ ಬಿ.ಆರ್. ಚಂದ್ರಪ್ಪ, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕಾ, ಕ್ಷೇತ್ರ ಶಿಕ್ಷಣಾಧಿಕಾರಿ ಈ. ಹಾಲಮೂರ್ತಿ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಬಿ. ಮಹೇಶ್ವರಪ್ಪ, ಕೆಪಿಸಿಸಿ ಸದಸ್ಯ ಕಲ್ಲೇಶ್‌ರಾಜ್ ಪಟೇಲ್, ಬಿ.ಎನ್. ಸುರೇಶ್‌ರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತೇಶ್, ಕಾರ್ಯದರ್ಶಿ ಆಂಜನೇಯ ನಾಯ್ಕ ಇದ್ದರು.