

ಹುಲಿಯೂರು ದುರ್ಗ: ಎಸ್ಡಿಎಂಸಿ ಮಾಜಿ ಅಧ್ಯಕ್ಷರನ್ನೇ ಮುಖ್ಯಶಿಕ್ಷಕ ಕೂಡಿಹಾಕಿದ್ದ ಪ್ರಕರಣ ಸಂಬಂಧ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ನೀಲಸಂದ್ರ ಗ್ರಾಮದ ಸರ್ಕಾರಿ ಶಾಲೆಗೆ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ ಭೇಟಿ ನೀಡಿ, ಪಾಲಕರು, ಮಕ್ಕಳು ಹಾಗೂ ಶಿಕ್ಷಕರಿಂದ ಮಾಹಿತಿ ಕಲೆಹಾಕಿದರು.
ಶುಕ್ರವಾರ "ವಿಜಯವಾಣಿ'ಯು "ಎಸ್ಡಿಎಂಸಿ ಮಾಜಿ ಅಧ್ಯಕ್ಷರನ್ನೇ ಕೂಡಿ ಹಾಕಿದ ಮುಖ್ಯಶಿಕ್ಷಕ' ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಇಒ ಸ್ಥಳಕ್ಕೆ ಭೇಟಿ ನೀಡಿದ್ದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ಯಾವುದೇ ಮಾಹಿತಿ ನೀಡದೆ ಅಧ್ಯಕ್ಷ ಸ್ಥಾನದಿಂದ ತೆರವು ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಶಾಲೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಪ್ರೌಢಶಾಲೆಮಟ್ಟದ ಶಿಕ್ಷಕರ ಸಮಿತಿ ರಚಿಸಿ ವರದಿ ಪಡೆದು ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಬಿಇಒ ತಿಳಿಸಿದರು.
ಶಿಕ್ಷಕನ ಪರ ಇಲಾಖೆ ವಕಾಲತ್ತು?
ಗುರುವಾರ ಶಾಲೆಯಲ್ಲಿ ಶಿಕ್ಷಕ ದೊಡ್ಡಯ್ಯ ಮಾಜಿ ಅಧ್ಯಕ್ಷೆಯನ್ನು ಶಾಲೆಯಲ್ಲಿ ಕೂಡಿಹಾಕಿ ಬೀಗ ಹಾಕಿದ್ದ ಪ್ರಕರಣ ಸಂಬಂಧ ದೂರು ನೀಡಿದ್ದರೂ ಪ್ರಕರಣ ದಾಖಲಾಗಿಲ್ಲ. ಆದರೆ, ಅವ್ಯವಹಾರ ಪ್ರಶ್ನಿಸಿದ ಎಸ್ಡಿಎಂಸಿ ಮಾಜಿ ಅಧ್ಯಕ್ಷೆ ಗೀತಾ ವಿರುದ್ಧ ಶಿಕ್ಷಕ ದೊಡ್ಡಯ್ಯ ಹುಲಿಯೂರುದುರ್ಗ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ, ದೂರು ನೀಡಿದ್ದು, ವಿಜಯಕುಮಾರ, ಆನಂದ್ ಎಂಬುವವರ ಮೇಲೂ ಪ್ರಕರಣ ದಾಖಲಾಗಿದೆ. ಶಾಲೆಯಲ್ಲಿ ನಡೆಯುತ್ತಿರುವ ಅವ್ಯವಹಾರ ಹಾಗೂ ಶಿಕ್ಷಕ ದೊಡ್ಡಯ್ಯ ಶಾಲೆಗೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಬಗ್ಗೆ ಮಾಜಿ ಎಸ್ಡಿಎಂಸಿ ಅಧ್ಯಕ್ಷೆ ಗೀತಾ ಹಾಗೂ ಗ್ರಾಮಸ್ಥರು ಎರಡು ತಿಂಗಳ ಹಿಂದೆ ನೀಡಿರುವ ದೂರಿಗೆ ಶಿಕ್ಷಣಾಧಿಕಾರಿಗಳು ಇದುವರೆಗೂ ಕ್ರಮ ಕೈಗೊಂಡಿಲ್ಲ. ಸಮಸ್ಯೆ ಇಲಾಖೆಗೆ ಗೊತ್ತಿದ್ದರೂ ಕ್ರಮ ಕೈಗೊಳ್ಳದೆ ಅಧಿಕಾರಿಗಳು ಶಿಕ್ಷಕನ ಪರವಾಗಿ ನಿಂತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂಬುದು ಸ್ಥಳಿಯರ ಆರೋಪವಾಗಿದೆ.