

ದೇವನಹಳ್ಳಿ: ಬಾಲ್ಯದಲ್ಲಿ ಏನೂ ಅರಿಯದ ಒಂದು ಬಂಡೆಯಂತಿರುವ ನಮ್ಮನ್ನು ತಿದ್ದಿ ತೀಡಿ ಜ್ಞಾನವಂತ, ವಿದ್ಯಾವಂತ ನಾಗರಿಕನನ್ನಾಗಿ ಮಾಡಿ ದೇಶದ ಆಸ್ತಿಯಾಗಿ ರೂಪಿಸುವ ಶಿಲ್ಪಿಗಳು ಶಿಕ್ಷಕರು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಬಣ್ಣಿಸಿದ್ದಾರೆ.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಸಾವಿತ್ರಿ ಬಾಯಿ ಪುಲೆ ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಗುರುವಿಲ್ಲದೇ ಯಾರೂ ಇಲ್ಲ. ಇಂದು ನಾನು ಈ ಸ್ಥಾನಕ್ಕೆರಲು ನನ್ನ ಗುರುಗಳು ಕಲಿಸಿದ ವಿದ್ಯೆ, ಮಾರ್ಗದರ್ಶನ ಕಾರಣವಾಗಿದೆ ಎಂದು ಹೇಳಿದರು.
ಬಿಇಒ ಅಶ್ವತ್ಥನಾರಾಯಣಗೌಡ ಮಾತನಾಡಿ, ರಾಷ್ಟ್ರೀಯ ಶೋಕಾಚರಣೆ ಇರುವ ಕಾರಣ ಶಿಕ್ಷಕರ ದಿನವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಪ್ರತಿ ವಷದಂತೆ ಈ ವರ್ಷವೂ 26 ನಿವೃತ್ತ ಶಿಕ್ಷಕ, ಶಕ್ಷಿಕಿಯರನ್ನು ಗೌರವಿಸಲಾಗುತ್ತಿದೆ ಎಂದರು.
ತಹಸೀಲ್ದಾರ್ ಅಜಿತ್ ರೈ ಮಾತನಾಡಿ, ಒಬ್ಬ ಶಿಕ್ಷಕ ಮನಸ್ಸು ಮಾಡಿದರೇ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ರಾಷ್ಟ್ರಪತಿಗಳಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಏಪಿಜೆ ಅಬ್ದುಲ್ ಕಲಾಂ ಅವರೆ ಸಾಕ್ಷಿ ಎಂದರು.
ತಾಪಂ ಇಒ ವಸಂತಕುಮಾರ್, ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್, ಸದಸ್ಯರಾದ ಜಿ.ಎ. ರವೀಂದ್ರ, ಎಸ್. ನಾಗೇಶ್, ಕೋಮಲಾ ನಟರಾಜ್, ತಾಪಂ ಅಧ್ಯಕ್ಷೆ ಶಶಿಕಲಾ ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಮುನೇಗೌಡ, ಸದಸ್ಯರಾದ ಮಂಜುನಾಥ, ಭಾರತಿ ಲಕ್ಷ್ಮಣಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ದೈಹಿಕ ಶಿಕ್ಷಕರ ಸಂಘದ ಬಿ.ಪುಟ್ಟಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು ಮತ್ತಿತರರಿದ್ದರು.